ಹೆಬ್ರಿ : ನನಗೆ ವಹಿಸಿದ ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಆ ಮೂಲಕ ಜನರಿಗೆ ನ್ಯಾಯ ಕೊಟ್ಟಿದ್ದೇನೆ. ಹೆಬ್ರಿಯಲ್ಲಿ ವಿವಿಧ ಸಂಘ ಸಂಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಜನರ ಸೇವೆ ಮಾಡಿರುವುದಕ್ಕೆ ಪ್ರಶಸ್ತಿಯು ಸಂದ ಗೌರವ. ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಎಂದು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಹೆಚ್. ಜನಾರ್ದನ್ ಹೇಳಿದರು.
ಅವರು ಹೆಬ್ರಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ಹೆಬ್ರಿ ತಾಲ್ಲೂಕು ಪಂಚಾಯಿತಿ ಇಒ ಶಶಿಧರ್ ಕೆಜೆ ಮಾತನಾಡಿ ಜನಾರ್ಧನ್ ಅವರಿಗೆ ಸಂದ ಗೌರವಕ್ಕೆ ನಮಗೆಲ್ಲ ಹೆಮ್ಮೆ ಇದೆ. ಸಮಾಜ ಹಾಗೂ ಕನ್ನಡ ಸೇವೆಗೆ ಸಿಕ್ಕ ಗೌರವ ಇದಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗಳು ಬರುವಂತಾಗಲಿ ಎಂದರು.
ಅಧ್ಯಕ್ಷತೆಯನ್ನು ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರನಾಥ ಎಸ್ ಬಂಗೇರ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್ ನಾಯಕ್, ಸುಮಾ ಅಡ್ಯಂತಾಯ, ಸುರೇಖಾ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.
ಲೆಕ್ಕ ಸಹಾಯಕಿ ಪ್ರತಿಭಾ, ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿಗಳಿದ್ದರು. ಪಂಚಾಯಿತಿ ಸಿಬ್ಬಂದಿ ಪ್ರಸಾದ್ ಶೆಟ್ಟಿ ನಿರೂಪಿಸಿದರು.