ಕೃಷಿ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ ಸಹಕಾರಿ ಸಂಘದ ರೈತ ಸದಸ್ಯರುಗಳಿಗೆ ಕೃಷಿ ಸಾಲ ಮತ್ತೇ ನೀಡುವಂತೆ ಒತ್ತಾಯಿಸಿ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದಲ್ಲಿ ಪ್ರತಿಭಟನೆ ನಾಳೆ(ಮಂಗಳವಾರ) ನಡೆಸುವುದಾಗಿ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಮತ್ತು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಕಲ್ಲಬೆಟ್ಟು ಸಹಕಾರಿ ಸಂಘದಲ್ಲಿ ಈಗಾಗಲೇ ಕೃಷಿ ಸಾಲ ಪಡೆದ ರೈತರು ತಮ್ಮ ಸ್ವಾಭಿಮಾನ, ಪ್ರಾಮಾಣಿಕತೆಗಾಗಿ ಬೇರೆ ಬೇರೆ ಕಡೆಗಳಿಂದ ಹಣ ಒಟ್ಟುಗೂಡಿಸಿ ಸಾಲವನ್ನು ಮರುಪಾವತಿಸಿದ್ದಾರೆ. ಈ ಸದಸ್ಯರಿಗೆ ಮತ್ತೇ ಕೃಷಿ ಸಾಲ ಪಡೆಯಲು ಸಹಕಾರಿ ಸಂಘದ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಚುನಾವಣೆಯ ನೆಪವೊಡ್ಡಿ ರೈತ ಸದಸ್ಯರಿಗೆ ಕೃಷಿ ಸಾಲವನ್ನು ನಿರಾಕರಿಸಲಾಗುತ್ತಿದೆ.
ಈ ಬಗ್ಗೆ ಸಹಕಾರಿ ಸಂಘದ ಡಿಆರ್, ಎಆರ್ ಅವರಿಗೆ ಮೌಖಿಕವಾಗಿ ದೂರು ನೀಡಿದಾಗ ಕೃಷಿ ಸಾಲ ನಿರಾಕರಿಸುವಂತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ಕೂಡಲೇ ಕೃಷಿ ಸಾಲ ಮಂಜೂರಾತಿ ಬಗ್ಗೆ ನಿರ್ಧರಿಸದಿದ್ದಲ್ಲಿ ರೈತ ಸದಸ್ಯರೊಂದಿಗೆ ಸೇರಿ ಸಹಕಾರಿ ಸಂಘದಲ್ಲಿ ಪ್ರತಿಭಟನೆ ನಡೆಸುವುದಾಗಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.