ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ಹಿಂದುಗಳ ಮನೆ ಮನೆಗಳಲ್ಲಿ ಕಂಡು ಬರುತ್ತಿರುವ ಜಾನುವಾರುಗಳ ಅವಶೇಷಗಳ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಹಸಂಯೋಜಕ ಸಮಿತ್‌ರಾಜ್ ದರೆಗುಡ್ಡೆ ಆಗ್ರಹಿಸಿದ್ದಾರೆ.
ವೇದಿಕೆಯ ಮೂಡುಬಿದಿರೆ ತಾಲೂಕು ಸಂಯೋಜಕ ಹರೀಶ್ಚಂದ್ರ ಕೆ.ಸಿ. ಅವರೊಂದಿಗೆ ವಾಲ್ಪಾಡಿಯ ಹಿಂದು ಒಬ್ಬರ ಮನೆಗೆ ಭೇಟಿ ನೀಡಿ ಮನೆಯ ಅಂಗಳದಲ್ಲಿರುವ ದನದ ಚರ್ಮ ಪರಿಶೀಲಿಸಿ ಮಾತನಾಡಿದ ಅವರು ಪರಿಸರದಲ್ಲಿ ಜಾನುವಾರುಗಳ ಅಕ್ರಮ ಕಸಾಯಿ ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಆಕ್ರೋಶ ತಿಳಿಸಿದರು.
ಈ ಪರಿಸರದ ಹಲವಾರು ಮನೆಗಳಲ್ಲಿ ಜಾನುವಾರುಗಳ ಅವಶೇಷ ಕಂಡುಬಂದಿರುವ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ನಡೆಸುವಂತೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರೂ ಕ್ರಮಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಪಾಡಿ ಗ್ರಾಮದ ಪರಿಸರದಲ್ಲಿ ರೈತರ ಮನೆಗಳಿಂದ ಅಕ್ರಮವಾಗಿ ಜಾನುವಾರುಗಳನ್ನು ಹೊತ್ತೊಯ್ಯ್ದು ಅಕ್ರಮ ಕಸಾಯಿಖಾನೆಗಳಲ್ಲಿ ವಧೆ ನಡೆಸುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಹಿಂದು ಜಾಗರಣ ವೇದಿಕೆ ಕಸಾಯಿಖಾನೆಗಳ ವಿರುದ್ಧ ದಾಳಿ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. ಒಂದು ವೇಳೆ ಈ ದಾಳಿ ನಡೆದಲ್ಲಿ ಪೊಲೀಸ್ ಇಲಾಖೆಯೇ ಕಾರಣವಾಗಲಿದೆ ಎಂದು ಅವರು ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.