ಮೂಡುಬಿದಿರೆಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಶಾಸಕರಾಗಿದ್ದಾಗ ಸುಮಾರು 15ಸಾವಿರ ಹಕ್ಕುಪತ್ರಗಳನ್ನು ನೀಡಲಾಗಿದೆ. ಆದರೆ ಈಗಿನ ನಮ್ಮ ಶಾಸಕರು ತನಗೆ ಹಕ್ಕು ಪತ್ರ ನೀಡಲು ಅವಕಾಶ ನೀಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಶಾಸಕರಾಗಿ ಅವರ ಅಸಹಾಯಕತೆ ವಿಷಾದಕಾರ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು. ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಹಿಂದಿನ ಸರಕಾರದ ಅವಧಿಯಲ್ಲಿ ರೂಪಿಸಲಾದ 94ಸಿ, 94ಸಿಸಿ ಬಡವರ ಮನೆಯ ಕನಸನ್ನು ಪೂರೈಸಲು ಈ ಬಾರಿ ಕಾಂಗ್ರೆಸ್ ಮೂಡುಬಿದಿರೆ ತಾಲೂಕಿನಲ್ಲಿ 300ಹಕ್ಕುಪತ್ರಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಬೆಂಬಲಿತ ಪುರಸಭಾ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರುಗಳು ಹೋರಾಟದ ಮೂಲಕ ಹಕ್ಕುಪತ್ರಗಳನ್ನು ಬಡ ಜನರಿಗೆ ಸಿಗುವಂತೆ ಮಾಡಲಾಗಿದೆ ಎಂದು ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡರು. ಕ್ಷೇತ್ರದ ಬಹುತೇಕ ಜನರಿಗೆ ಯಾವುದೇ ಜಾತಿ ಮತ ಭೇದವಿಲ್ಲದೆ ಹಕ್ಕುಪತ್ರಗಳನ್ನು ನೀಡಲಾಗುತ್ತಿದ್ದು, ಮೀಸಲು ಅರಣ್ಯ ಮುಂತಾದ ಸಣ್ಣ ಪುಟ್ಟ ತೊಡಕುಗಳಿದ್ದರೂ ಸಮಸ್ಯೆಗಳನ್ನು ಪರಿಹರಿಸಿ ಹಕ್ಕುಪತ್ರ ನೀಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಜ.17ರಂದು ಅಪರಾಹ್ನ 3ಗಂಟೆಗೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಬಡಜನರ ನಿವೇಶನದ ಕನಸಿಗೆ ವ್ಯವಸ್ಥೆಯನ್ನು ಒದಗಿಸುವ ಕಾರ್ಯವನ್ನು ಮಾಡಲಿದ್ದು, ಬಿಜೆಪಿ ನೇತೃತ್ವದ ಸರಕಾರದಲ್ಲಿ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿಯವರನ್ನು ಕಡೆಗಣಿಸಿ ಹಕ್ಕುಪತ್ರವನ್ನು ನೀಡಲಾಗಿತ್ತು. ಅಲ್ಪಸಂಖ್ಯಾತ ಪ್ರದೇಶವಾಗಿರುವ ವಾಲ್ಪಾಡಿಯ ಸರ್ವೇ ನಂಬ್ರ 132ರಲ್ಲಿ ಸುಮಾರು 50ಮನೆಗಳಿಗೆ ಹಕ್ಕುಪತ್ರಗಳನ್ನು ನೀಡಲು ಬಿಜೆಪಿ ನಿರಾಕರಿಸಿತ್ತು ಎಂದು ಅವರು ಆರೋಪಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ ಬಿಜೆಪಿ ಸರಕಾರದಲ್ಲಿ ಸಿ.ಟಿ. ರವಿ ಉಸ್ತುವಾರಿ ಸಚಿವರಾಗಿದ್ದಾಗ ಮೂಡುಬಿದಿರೆಗೆ ಆಗಾಗ್ಗೆ ಆಗಮಿಸಿ ತನ್ನ ಪ್ರಭಾವ ಬೀರುತ್ತಿದ್ದರು. ಹಾಗೇನೇ ಈ ಬಾರಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮೂಡುಬಿದಿರೆಗೆ ಆಗಮಿಸಿ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅವರ ಹಕ್ಕು ಎಂದು ಹೇಳಿದರು.
ನನ್ನನ್ನು ಮತ್ತು ಉಸ್ತುವಾರಿ ಸಚಿವರನ್ನು ಹೊಗಳುವ ಮೂಲಕ ಕಾಂಗ್ರೆಸ್ ಉಳಿದ ನಾಯಕರುಗಳ ನಡುವೆ ಹುಳಿ ಹಿಂಡುವ ಕೆಲಸವನ್ನು ಶಾಸಕರು ಮಾಡಬಾರದು ಎಂದು ಅಭಯಚಂದ್ರ ಜೈನ್ ಹೇಳಿದರು. ನಾನು ಕಾಂಗ್ರೆಸ್ ಕಟ್ಟಾಳು ಎಂದು ಅಭಿಪ್ರಾಯಪಟ್ಟರು. ಅಭಯಚಂದ್ರ ಜೈನ್ ಮತ್ತು ನನ್ನ ನಡುವೆ ಉತ್ತಮ ಬಾಂಧವ್ಯ ಇದ್ದು ಬಿಜೆಪಿ ಅದನ್ನು ಕೆಡಿಸಲು ಯತ್ನಿಸುತ್ತಿದೆ ಎಂದು ಮಿಥುನ್ ರೈ ದೂರಿದರು. ಗೋಷ್ಠಿಯಲ್ಲಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ, ಸುರೇಶ್ ಪ್ರಭು, ಜೊಸ್ಸಿ ಮಿನೇಜಸ್, ಕರೀಂ ಉಪಸ್ಥಿತರಿದ್ದರು.