ಕಾರ್ಕಳ : ಕಾರ್ಕಳ ಪುರಸಭಾ ವ್ಯಾಪ್ತಿಯ ಶ್ರೀ ಕ್ಷೇತ್ರ ಬ್ರಹ್ಮಸ್ಥಾನ ಅಭ್ಯುದಯ ಸಮಿತಿ ಕಲ್ಲೊಟ್ಟೆ ಇದರ ನೇತೃತ್ವದಲ್ಲಿ ಕಲ್ಲೊಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಪುನಃ ಪ್ರತಿಷ್ಠಾಪನಾ ರಜತ ಮಹೋತ್ಸವ ಹಾಗೂ ಬ್ರಹ್ಮಮಂಡಲ ಸೇವೆ ಮೇ 10ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ಫೆ. 16ರಂದು ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಪಾಕಶಾಲಾ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮ ಜರುಗಿತು.
ಅರ್ಚಕರಾದ ಪೆರ್ವಾಜೆ ವೆಂಕಟರಾಜ್ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ವಿಜಯ ಶೆಟ್ಟಿ, ಈ ಜಗತ್ತಿನಲ್ಲಿ ದೇವರ ಅನುಗ್ರಹವಿಲ್ಲದೆ ಯಾವ ಕೆಲಸವು ನಡೆಯುವುದಿಲ್ಲ. ಅಂತೆಯೇ ದೇವರ ಅಪೇಕ್ಷೆಯಂತೆ ಶ್ರೀ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಇಂದು ಶಿಲಾನ್ಯಾಸ ನಡೆದಿದೆ. ದೇವರ ಸೇವೆಯಲ್ಲಿ ಎಲ್ಲರೂ ಭಾಗಿಯಾಗಿ ಧನ್ಯರಾಗೋಣ ಎಂದರು.
ಪುರಸಭಾ ನಿವೃತ್ತ ಮುಖ್ಯಾಧಿಕಾರಿ ಪತ್ತೊಂಜಿಕಟ್ಟೆ ಗೋಪಾಲ ಕೃಷ್ಣ ಶೆಟ್ಟಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳೊಂದಿಗೆ ಕ್ಷೇತ್ರದ ಕಾರಣೀಕತೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ಹಿರಿಯರು-ಕಿರಿಯರ ಸಹಭಾಗಿತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯ ನಡೆಯಲಿ. ತನ್ಮೂಲಕ ದೇವರ ಕೃಪೆಗೆ ಪಾತ್ರರಾಗೋಣ ಎಂದರು.
ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್ ಮಾತನಾಡಿ, ಇಂತಹ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ದೊರೆತಿರುವುದು ನಮ್ಮ ಪುಣ್ಯ. ಮಾನವ ಕೊಟ್ಟರೆ ಮನೆತನಕ ದೇವರು ಕೊಟ್ಟರೆ ಕೊನೆತನಕ ಎಂಬ ನಾಣ್ಣುಡಿಯಂತೆ ಕ್ಷೇತ್ರದಲ್ಲಿ ಅನ್ನದಾಸೋಹ ಕೇಂದ್ರ ನಿರ್ಮಿಸಿ ಭಗವಂತನ ಸೇವೆ ನೆರವೇರಿಸಲು ಮಾಡಿಕೊಂಡಿರವ ಸಂಕಲ್ಪ ಕೇವಲ ಈ ಜಾಗಕ್ಕೆ ಮಾತ್ರ ಸೀಮಿತವಾಗದೆ ಇಡೀ ಊರಿಗೆ ಅನ್ನದಾನ ಸೇವೆಯನ್ನು ಮಾಡುವಂತಾಗಲಿ. ಆ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಬೆಳಗಲಿ, ಅದಕ್ಕಾಗಿ ನಾವೆಲ್ಲಾ ಜೊತೆಯಾಗಿ ಕಾರ್ಯನಿರ್ವಹಿಸೋಣ ಎಂದರು.
ಈ ಸಂದರ್ಭ ಪಾಕಶಾಲೆಗೆ ಸ್ಥಳದಾನ ಮಾಡಿರುವ ಉಪ್ಪೂರು ಶ್ರೀನಿವಾಸರಾಯರ ಮಗಳು, ಕಲ್ಲೊಟ್ಟೆ ನಿವಾಸಿ ಸತೀಶ್ ಕುಮಾರ್ ಅವರ ಪತ್ನಿ ಆಶಾ ಸತೀಶ್ ಕುಮಾರ್, ಶಿಲ್ಪಿ ಕುಪ್ಪಸ್ವಾಮಿ, ಪುರಸಭಾ ಸದಸ್ಯೆ ಶಶಿಕಲಾ ಶೆಟ್ಟಿ, ನಿವೃತ್ತ ಶಿಕ್ಷಕಿ ಪ್ರಮೋದಾ, ನಿವೃತ್ತ ಪ್ರಾಂಶುಪಾಲ ಮಾಧವ ಭಟ್, ಪಿ. ಸುಂದರ ಶೆಟ್ಟಿಗಾರ್, ಉದ್ಯಮಿ ಅನಂತ ಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.