ಕಾರ್ಕಳ: ಕಾರ್ಕಳದ ಅಸ್ಮಿತೆಯಾಗಬೇಕಿದ್ದ ಪರಶುರಾಮ ಥೀಂಪಾರ್ಕ್ ಈ ಸ್ಥಿತಿ ತಲುಪುವುದಕ್ಕೆ ನೇರಹೊಣೆಗಾರರಾದ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿಯವರೇ, ನಿಮ್ಮ ದುರ್ಬುದ್ಧಿ ಯಾವಾಗ ಕಡಿಮೆಯಾಗಿತ್ತದೆ ಎಂದು ಮೊದಲು ಅಷ್ಟಮಂಗಲಪ್ರಶ್ನೆ ಕೇಳಿ ಎಂದು ಬಿಜೆಪಿ ಕ್ಷೇತ್ರ ಅಧ್ಯಕ್ಷ ನವೀನ್ ನಾಯಕ್ ಪ್ರಶ್ನೆ ಮಾಡಿದ್ದಾರೆ.
ಒಂದು ಜನಪ್ರಿಯ ಯೋಜನೆಯನ್ನು ಹಳ್ಳಹಿಡಿಸುವುದಕ್ಕಾಗಿ ನೀವು ಕಳೆದ ಎರಡು ವರ್ಷಗಳಿಂದ ನಡೆಸುತ್ತಿದ್ದ ಷಡ್ಯಂತ್ರದವಿರುದ್ಧ ಈಗ ಕಾರ್ಕಳದ ಜನ ಹಾದಿಬೀದಿಯಲ್ಲಿ ಉಗಿಯುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈಗ ಅಷ್ಟಮಂಗಲದ ನಾಟಕ ಪ್ರಾರಂಭಿಸಿದ್ದಾರೆ.
ಥೀಂ ಪಾರ್ಕ್‌ನ್ನು ಕಟ್ಟಿದ್ದು ಅಪ್ಪಟ ಪ್ರವಾಸೋದ್ಯಮ ಉದ್ದೇಶದಿಂದ. ಭಜನಾ ಮಂದಿರವನ್ನು ಬಿಟ್ಟರೆ ಯಾವುದೇ ಧಾರ್ಮಿಕ ಚಟುವಟಿಕೆಗಳ ಉದ್ದೇಶದಿಂದ ಮಾಡಿದ್ದಲ್ಲ. ಆದರೆ ಈಗ ಅಷ್ಟಮಂಗಲದ ವಿಚಾರ ಪ್ರಸ್ತಾಪಿಸಿ ಕಾಮಗಾರಿಗೆ ಇನ್ನಷ್ಟು ಅಡ್ಡಿ ಮಾಡುವುದಷ್ಟೇ ನಿಮ್ಮ ಉದ್ದೇಶವೆಂದು ತೋರುತ್ತಿದೆ.
ಉದಯ ಕುಮಾರ್ ಶೆಟ್ರೆ, ಪರಶುರಾಮ ಥೀಂ ಪಾರ್ಕ್ ನೀವು ನಡೆಸುವ ಕಳಪೆ ರಸ್ತೆ ಕಾಮಗಾರಿಯಂತೆ ಅಲ್ಲ. ಮೊದಲು ಥೀಂಪಾರ್ಕ್ ಎಂದರೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಿ?.
ಎರಡು ವರ್ಷಗಳಿಂದ ಯೋಜನೆ ನಿಲ್ಲಿಸುವುದಕ್ಕೆ ಮಾಡಿದ ಕಪಿಚೇಷ್ಠೆಗಳು ಸಾಕು. ಮೂರ್ತಿ ಪೈಬರ್‌ನದ್ದು ಎಂದುನೀವು ಮಾಡಿದ ಮೊದಲ ಆರೋಪವೇ ಈಗ ನ್ಯಾಯಾಲಯದಲ್ಲಿ ಬಿದ್ದು ಹೋಗಿದೆ. ನಿರ್ಮಿತಿ ಕೇಂದ್ರದ ಅಧಿಕಾರಗಳನ್ನು ರಾಜಕೀಯ ಒತ್ತಡದ ಮೂಲಕ ಅಮಾನತು ಮಾಡಿಸಿದ ನೀವು, ಮೂರ್ತಿಯನ್ನು ಪೊಲೀಸ್ ಸ್ಟೇಷನ್‌ನ ಗೋದಾಮುನಲ್ಲಿ ಧೂಳು ಹಿಡಿಯುವ ಹಾಗೆ ಮಾಡಿದಿರಿ.
ಶಿಲ್ಪಿ ಕೃಷ್ಣ ನಾಯಕ್ ಮೇಲೆ ನಡೆಸಿದ ದೌರ್ಜನ್ಯವನ್ನು ಕಾರ್ಕಳದ ಜನ ಮರೆತಿಲ್ಲ. ಥೀಂಪಾರ್ಕ್ ಸಂಪರ್ಕಿಸುವ ರಸ್ತೆಯ ಮೇಲೆ ಮಣ್ಣು ಹಾಕಿ ಸಂಚಾರ ಪ್ರತಿಬಂಧಿಸಿದಾಗ ನಿಮಗೇ ಅಷ್ಟಮಂಗಲ ಕೇಳಬೇಕೆಂದೆನಿಸಿಲ್ಲ. ಇಂಥ ರಾಜಕೀಯ ದುರ್ಬುದ್ಧಿಯವಿರುದ್ಧ ಮೊದಲು ಅಷ್ಟಮಂಗಲ ಪ್ರಶ್ನೆ ಮಾಡಿ, ನಂತರ ಉಳಿದ ವಿಚಾರದ ಬಗ್ಗೆ ಮಾತನಾಡೋಣ ಎಂದು ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ಹಾಗೂ ಕಾರ್ಯದರ್ಶಿ ಸುಮಿತ್ ಶೆಟ್ಟಿ ಕೌಡೂರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.