ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಜನವರಿ 31ರಂದು ನಡೆಯುವ ಕೋಟಿ ಚೆನ್ನಯ ಜೋಡುಕರೆ ಕಂಬಳ ಚಿನ್ನದ ಕಂಬಳವಾಗಿ ಮೂಡಿ ಬಂದಿದೆ. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲು ಉದ್ದೇಶಿಸಲಾಗಿದ್ದು, ಚಿನ್ನದ ಬೆಲೆ ಏರಿಕೆ ನಡುವೆಯೂ ಬಹುಮಾನವಾಗಿ ಚಿನ್ನ ನೀಡಲು ನಿರ್ಧರಿಸಲಾಗಿದೆ. ಬಹುಮಾನಗಳು ಕನೆಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಲ್ಲಿ ಏಳುವರೆ ಕೋಲುಗೆ ಒಂದುವರೆ ಪವನು, ಆರುವರೆ ಕೋಲುಗೆ ಮುಕ್ಕಾಲು ಪವನು, ಹಗ್ಗ, ಹಿರಿಯ ವಿಭಾಗದಲ್ಲಿ ಪ್ರಥಮ ಒಂದುವರೆ ಪವನು, ದ್ವಿತೀಯ ಮುಕ್ಕಾಲು ಪವನು, ನೇಗಿಲು ಹಿರಿಯ ವಿಭಾಗ ಪ್ರಥಮ ಒಂದು ಪವನು, ದ್ವಿತೀಯ ಅರ್ಧ ಪವನು, ಅಡ್ಡ ಹಲಗೆ ವಿಭಾಗ ಪ್ರಥಮ ಮುಕ್ಕಾಲು ಪವನು, ದ್ವಿತೀಯ ಅರ್ಧ ಪವನು, ಹಗ್ಗ ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ ಮುಕ್ಕಾಲು ಪವನು, ದ್ವಿತೀಯ ಅರ್ಧ ಪವನು, ವಿಜೇತ ಕೋಣಗಳನ್ನು ಓಡಿಸಿದವರಿಗೆ ಕಾಲು ಪವನು, ವಿಜೇತ ಕೋಣಗಳ ಸಹಾಯಕ ತಂಡಕ್ಕೆ ರೂ.1000 ನಗದು ಬಹುಮಾನ ಲಭಿಸಲಿದೆ.

ಪ್ರಧಾನ ತೀರ್ಪುಗಾರರಾಗಿ ವಿಶ್ರಾಂತ ಪ್ರಾಂಶುಪಾಲ ಕೆ. ಗುಣಪಾಲ ಕಡಂಬ, ತೀರ್ಪುಗಾರರ ಸಂಚಾಲಕರಾಗಿ ವಿಜಯಕುಮಾರ್ ಕಂಗಿನ ಮನೆ, ವೀಕ್ಷಕ ವಿವರಣೆ ಮತ್ತು ತೀರ್ಪುಗಾರರಾಗಿ ರಾಜೀವ ಶೆಟ್ಟಿ ಎಡ್ತೂರು, ರವೀಂದ್ರ ಕುಮಾರ್ ಕುಕ್ಕುಂದೂರು, ನವೀನ್ಚಂದ್ರ ಅಂಬೂರಿ, ಸುಧಾಕರ ಶೆಟ್ಟಿ ಮುಗ್ರೋಡಿ, ಸತೀಶ್ ಹೊಸ್ಮಾರು, ವಿದ್ಯಾಧರ ಜೈನ್ ರೆಂಜಾಳ ಸಹಕರಿಸಲಿದ್ದಾರೆ.
ವೀಡಿಯೋ ತೀರ್ಪುಗಾರರಾಗಿ ಬಂಟ್ವಾಳ ಮಹಾಕಾಳಿಬೆಟ್ಟು ಸೀತಾರಾಮ್ ಶೆಟ್ಟಿ, ಮೂಡುಬಿದಿರೆ ಕಂಬಳ ಸಮಿತಿ ಉಪಾಧ್ಯಕ್ಷ ಸುರೇಶ್ ಕೆ. ಪೂಜಾರಿ, ತೋಡಾರು ಪಂಚಶಕ್ತಿ ರಂಜಿತ್ ಪೂಜಾರಿ ಸಹಕರಿಸಲಿದ್ದಾರೆ. ಸ್ಕೈವ್ಯೂ ಕಾರ್ಕಳ ವತಿಯಿಂದ ಲೇಸರ್ ಬೀಂ ನೆಟ್‌ವರ್ಕ್ ಸಿಸ್ಟಮ್ ಮತ್ತು ಟೈಮರ್ ಮೂಲಕ ದಾಖಲೀಕರಣ ನಡೆಯಲಿದೆ.
ನಗ್ರಿ ಸಂಕಪ್ಪ ಶೆಟ್ಟಿ, ಸಾಣೂರು ಕೆ. ಶ್ರೀಧರ ಆಚಾರ್, ಕೊಡಂಗಲ್ಲು ಜಗನ್ನಾಥ ಭಟ್, ಕಕ್ಯಪದವು ದಿನೇಶ್ ಬರವಣಿಗೆ ಮತ್ತು ದಾಖಲೆ ನಿರ್ವಹಣೆ ಮಾಡಲಿದ್ದಾರೆ. ಕೋಣಗಳನ್ನು ಗದ್ದೆಗೆ ಇಳಿಸಲು ನೇಗಿಲು ಕಿರಿಯ ವಿಭಾಗಕ್ಕೆ ಪೂರ್ವಾಹ್ನ ಗಂಟೆ 8.00, ಹಗ್ಗ ಹಿರಿಯ ಕಿರಿಯ ವಿಭಾಗ ಮಧ್ಯಾಹ್ನ ಗಂಟೆ 2.00, ನೇಗಿಲು ಹಿರಿಯ ಬೆಳಿಗ್ಗೆ ಗಂಟೆ 10.30, ಕನೆಹಲಗೆ ಮತ್ತು ಅಡ್ಡಹಲಗೆ ಅಪರಾಹ್ನ ಗಂಟೆ 4.00ಕ್ಕೆ ಸಮಯ ನಿಗದಿ ಪಡಿಸಲಾಗಿದೆ. ಕೋಣಗಳನ್ನು ಮೇಲೆ ಸೂಚಿಸಿರುವ ಸಮಯಕ್ಕೆ ಸರಿಯಾಗಿ ಕರೆಗೆ ಇಳಿಸಲಾಗುವುದು. ತಡವಾಗಿ ಬಂದ ಕೋಣಗಳಿಗೆ ಮಂಜೊಟ್ಟಿಯಲ್ಲಿ ಕರೆಗೆ ಇಳಿಯಲು ಅವಕಾಶವಿಲ್ಲ.
ಜಿಲ್ಲಾ ಕಂಬಳ ಸಮಿತಿಯು ಜಾರಿಗೊಳಿಸಿದ ಎಲ್ಲಾ ನಿಯಮಗಳನ್ನು ಈ ಕಂಬಳದಲ್ಲಿ ಪಾಲಿಸಲು ತೀರ್ಮಾನಿಸಲಾಗಿದೆ. ಅಹಿಂಸಾತ್ಮಕ ವಾಗಿ ಕಾನೂನಿನ ಚೌಕಟ್ಟಿನಲ್ಲಿ ನಿಗಧಿತ ಕಾಲಮಿತಿಯೊಳಗೆ ಕಂಬಳ ಕೂಟ ನಡೆಯಲಿದೆ
