Blog

ಕಾರ್ಕಳ ರಾಜಕೀಯ – ಮುಂದುವರಿದ ಹೇಳಿಕೆ ಯುದ್ಧ

ನಿರ್ಮಾಣ ಹಂತದಲ್ಲಿದ್ದ ಕಾಡುಹೊಳೆ ಕೊರಗರ ಸಮುದಾಯ ಭವನಕ್ಕೆ ಶಾಸಕರು ಕೊಳ್ಳಿ ಇಟ್ಟಾಗ, ಹೇಳಿಕೆಗೆ ಸೀಮಿತವಾದ ದಲಿತ ಮುಖಂಡರು ಯಾಕೆ ಮೌನವಾಗಿದ್ದರು: ನ್ಯಾಯವಾದಿ ರಾಘವ ಕುಕ್ಕುಜೆ, ಅಣ್ಣಪ್ಪ ನಕ್ರೆ ಗಂಭೀರ ಪ್ರಶ್ನೆ

ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅನುದಾನದ ಮೂಲಕ
ಕಾರ್ಕಳ ವಿಧಾನಸಭಾ ಕ್ಷೇತ್ರದ ಮರ್ಣೆ ಗ್ರಾಮದ ಕಾಡುಹೊಳೆ ಸಮೀಪದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ “ಕೊರಗರ ಸಮುದಾಯ ಭವನಕ್ಕೆ” ಕೊಳ್ಳಿ ಇಟ್ಟ ಕೀರ್ತಿ ಶಾಸಕ ಸುನೀಲ್ ಕುಮಾರ್ ಅವರಿಗೆ ಸಲ್ಲಬೇಕು ಎಂದು ದಲಿತ ಮುಖಂಡರಾದ ಅಣ್ಣಪ್ಪ ನಕ್ರೆ ಹಾಗೂ ರಾಘವ ಕುಕ್ಕುಜೆ ತಿಳಿಸಿದ್ದಾರೆ

ಉದ್ದೇಶಿತ ಕೊರಗರ ಸಮುದಾಯ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಸುಮಾರು 60 ಲಕ್ಷ ರೂಪಾಯಿ ಅನುದಾನ ಘೋಷಣೆಯಾಗಿದ್ದು ಅದರಲ್ಲಿ 20 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಟ್ಟಡದ ಕಾಮಗಾರಿ ಆರಂಭವಾದಾಗ ಶಾಸಕ ಸುನೀಲ್ ಕುಮಾರ್ ಅವರು ಪಿತೂರಿ ನಡೆಸಿ ನಿರ್ಮಾಣ ಕಾಮಗಾರಿಗೆ ಕೊಳ್ಳಿ ಇಡುವ ಕೃತ್ಯವನ್ನು ಮಾಡಿದ್ದಾರೆ. ದಲಿತ ಸಮುದಾಯಕ್ಕೆ ಸುನೀಲ್ ಕುಮಾರ್ ಮಾಡಿರುವ ಈ ಘೋರ ಅನ್ಯಾಯದ ಮಾಹಿತಿ ಇದ್ದರು ಬಿಜೆಪಿಯಲ್ಲಿ ಗುರುತಿಸಲ್ಪಟ್ಟು ಪ್ರಸ್ತುತ ಹೇಳಿಕೆ ನೀಡಿದ ದಲಿತ ಮುಖಂಡರುಗಳು ಆ ಸಂದರ್ಭದಲ್ಲಿ ಯಾವುದೇ ಪ್ರತಿರೋಧ ಒಡ್ಡದೆ ಮೌನವಹಿಸಿದ್ದು ವಿಪರ್ಯಾಸ.

ಇಂದಿಗೂ ಕೊರಗರ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯದೆ ಪಾಳು ಬಿದ್ದಿರುವುದು ಸುನಿಲ್ ಕುಮಾರ್ ದಲಿತ ಸಮುದಾಯಕ್ಕೆ ಮಾಡಿದ ಅನ್ಯಾಯಕ್ಕೆ ಜ್ವಲಂತ ಉದಾಹರಣೆಯಾಗಿದೆ. ಬಿಜೆಪಿಯಿಂದ ದುಷ್ಪ್ರೇರಣೆಗೆ ಒಳಗಾಗಿರುವ ಆ ಪಕ್ಷದ ದಲಿತ ಮುಖಂಡರು ದಲಿತ ಸಮುದಾಯಕ್ಕೆ ಇಷ್ಟು ದೊಡ್ಡ ಅನ್ಯಾಯವನ್ನು ಮಾಡಿದ ಶಾಸಕರ ಪರವಹಿಸಿ ಮಾತನಾಡಿರುವುದು ವಿಪರ್ಯಾಸ, ಸಮುದಾಯದ ಹಿತಕ್ಕಿಂತ ಬಿಜೆಪಿಯ ಶಾಸಕರ ಹಿತ ಕಾಯುವುದೇ ಆ ನಾಯಕರುಗಳಿಗೆ ಮುಖ್ಯವಾಯಿತೆ..?

ಕಾರ್ಕಳ ಅಂಬೇಡ್ಕರ್ ಭವನಕ್ಕೆ ಶಾಸಕರು 6 ಕೋಟಿ ಅನುದಾನವನ್ನು ತರಿಸಿದ್ದಾರೆ ಎನ್ನುವುದೇ ಹಾಸ್ಯಾಸ್ಪದ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಬೇಡ್ಕರ್ ಭವನಕ್ಕೆ ಮಂಜೂರಾದ ಮೊತ್ತ ಕೇವಲ 75 ಲಕ್ಷ ರೂಪಾಯಿ ಮಾತ್ರವಾಗಿದ್ದು ಪ್ರಸ್ತುತ ಅಂಬೇಡ್ಕರ್ ಭವನಕ್ಕೆ ಮಂಜೂರಾದ ಒಟ್ಟು ಮೊತ್ತ 6 ಕೋಟಿ ರೂಪಾಯಿಗಳನ್ನು ಕಾಂಗ್ರೆಸ್ ಸರ್ಕಾರವೇ ಮಂಜೂರು ಮಾಡಿದೆ ಎಂದು ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಶಾಸಕ ಸುನೀಲ್ ಕುಮಾರ್ ಸಮ್ಮುಖದಲ್ಲಿಯೇ ಸ್ವತಃ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್.ಸಿ. ಮಹಾದೇವಪ್ಪನವರು ಘಂಟಾಘೋಷವಾಗಿ ಹೇಳಿದಾಗ ಸುನೀಲ್ ಕುಮಾರ್ ಎದ್ದು ನಿಂತು ವಿರೋಧಿಸಬೇಕಿತ್ತು, ಅಂಬೇಡ್ಕರ್ ಭವನಕ್ಕೆ ಸುನೀಲ್ ಕುಮಾರ್ ಅನುದಾನ ತಂದಿರುವುದೇ ಆಗಿದ್ದರೆ ಸಚಿವರ ಮಾತಿಗೆ ಶಾಸಕರು ಯಾಕೆ ಮೌನವಾಗಿದ್ದರು..? ವಾಟ್ಸ್ಯಾಪ್ ಯುನಿವರ್ಸಿಟಿಯನ್ನು ನಂಬಿ ಹೇಳಿಕೆ ಕೊಡುವವರಿಗೆ ಶಾಸಕರ ಮೌನದ ಹಿಂದಿನ ಮರ್ಮ ಏನೆಂದು ತಿಳಿದಿದೆಯೆ..?

ಆರಂಭದ ದಿನಗಳಿಂದಲು ಕಾರ್ಕಳ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಮಂಜೂರಾತಿಗಾಗಿ ಮಾನ್ಯ ತಹಶಿಲ್ದಾರರಿಗೆ ಮನವಿ ಮಾಡಿದ ದಾಖಲೆಗಳು ನಮ್ಮಲ್ಲಿದೆ, ಕುಂದುಕೊರತೆ ಸಭೆಯಲ್ಲಿ ಈ ಬಗ್ಗೆ ನಾವು ಮಾತನಾಡಿರುತ್ತೇವೆ, ಕಾರ್ಕಳ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ನಾವು ಹೋರಾಟ ಮಾಡಿದ ದಾಖಲೆಗಳು ನಮ್ಮಲಿ ಇದೆ, ಹೇಳಿಕೆ ನೀಡಿದವರು ಹೋರಾಟ ಮಾಡಿದ್ದೇ ಆಗಿದ್ದರೆ ಅದರ ದಾಖಲೆ ಬಹಿರಂಗಪಡಿಸಲಿ. ವಾಟ್ಸ್ಯಾಪ್ ಯುನಿವರ್ಸಿಟಿಯಲ್ಲಿ ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿರುವ ಬಿಜೆಪಿಯ ದಲಿತ ನಾಯಕರು ದಲಿತ ಸಮುದಾಯದ ಪರವಾಗಿ ಯಾವ ಹೋರಾಟ ಕೈಗೊಂಡಿದ್ದಾರೆ, ಅವರ ಕೊಡುಗೆಗಳೇನು ಎಂದು ಮೊದಲು ಬಹಿರಂಗಪಡಿಸಲಿ.

ತನ್ನ ಕಚೇರಿಯಲ್ಲಿಯೇ ಇದ್ದ ಶಾಸಕರು ನೂತನ ಅಂಬೇಡ್ಕರ್ ಭವನದಲ್ಲಿ ನಡೆದ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳದೆ ಅಸಡ್ಡೆ ತೋರಿರುವುದನ್ನು ದಲಿತ ಸಮುದಾಯದ ಪರವಾಗಿ ನಾವು ಪ್ರಶ್ನೆ ಮಾಡಿದಾಗ ಊಟ ಆಯ್ತಾ ಕೇಳಿದರೆ ಮುಂಡಾಸು ಮೂವತ್ತು ಮೊಳ ಎಂದಂತೆ ಅಸಮರ್ಪಕ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ, ಇವರಿಗೆ ಸಮಾಜದ ಹಿತಕ್ಕಿಂತ ಬಿಜೆಪಿ ಶಾಸಕರ ತಪ್ಪನ್ನು ಸಮರ್ಥನೆ ಮಾಡುವುದೇ ಮುಖ್ಯವಾಯಿತೆ ಎಂದು ದಲಿತ ಸಮುದಾಯದ ಮುಖಂಡರಾದ ನ್ಯಾಯವಾದಿ ರಾಘವ ಕುಕ್ಕುಜೆ ಹಾಗೂ ಅಣ್ಣಪ್ಪ ನಕ್ರೆ ಅವರು ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಕಾರ್ಕಳದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು

Madhyama Bimba

ಮುಳ್ಕಾಡು ಸರಕಾರಿ ಶಾಲೆಯಲ್ಲಿ ಕೊಠಡಿಗಳಿಗೆ ಶಿಲಾನ್ಯಾಸ

Madhyama Bimba

ಪಿಕಪ್ ವಾಹನ ಕಳ್ಳತನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More