Blog

ಕಲ್ಲಬೆಟ್ಟು ಮಾರಿಗುಡಿಯಲ್ಲಿ ‘ಸಸ್ಯ ಶ್ಯಾಮಲಾ-2026’ ಆಂದೋಲನ- ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಿಂದ ಸಸಿ ವಿತರಣೆ

ಪ್ರಕೃತಿಯನ್ನು ಆರಾಧಿಸುವುದು ಎಂದರೆ ಬದುಕನ್ನೇ ಆರಾಧಿಸುವುದು. ಗಿಡವನ್ನು ನೆಡುವುದು ಎಂದರೆ ಕೇವಲ ಒಂದು ಸಸಿಯನ್ನು ಮಣ್ಣಿನಲ್ಲಿ ನೆಡುವುದಲ್ಲ; ಮುಂದಿನ ತಲೆಮಾರಿಗೆ ಉಸಿರು, ನೆರಳು ಮತ್ತು ಜೀವಸಂಪತ್ತಿನ ಆಶೀರ್ವಾದವನ್ನು ಅರ್ಪಿಸುವುದು. ಈ ಉನ್ನತ ಧ್ಯೇಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ಮೂಡುಬಿದಿರೆ ಕಲ್ಲಬೆಟ್ಟುವಿನ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ವತಿಯಿಂದ ಪರಿಸರ ಪ್ರೇಮಿ ಶ್ರೀಮತಿ ರಸಿಕ ಅವರ ಸ್ಮರಣಾರ್ಥ ಆಯೋಜಿಸಲಾದ “ಸಸ್ಯ ಶ್ಯಾಮಲಾ-2026” ಸಾವಿರ ಗಿಡಗಳನ್ನು ನೆಡುವ ಹಾಗೂ ಹಂಚುವ ಅಭಿಯಾನದ ನಾಲ್ಕನೇ ಕಾರ್ಯಕ್ರಮ ಕಲ್ಲಬೆಟ್ಟು ಶ್ರೀ ಮಹಾಮಾಯಿ ದೇವಸ್ಥಾನದ ಪವಿತ್ರ ಸನ್ನಿಧಿಯಲ್ಲಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಅವರು ಸಸಿಗಳನ್ನು ವಿತರಿಸಿ ಮಾತನಾಡಿ ಎಕ್ಸಲೆಂಟ್ ಸಂಸ್ಥೆಯ ಸಂಕಲ್ಪಿತ ಸಸ್ಯಶ್ಯಾಮಲಾ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಪ್ರಾಪ್ತವಾಗಿದ್ದು, ಈ ಅಭಿಯಾನವನ್ನು ಜನಾಂದೋಳನದ ಮಾದರಿಯಲ್ಲಿ ಬೆಳೆಸುತ್ತಿರುವುದಕ್ಕೆ ಸಾರ್ವಜನಿಕರಿಗೆ ಕೃತಜ್ಞತೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಮಹಾಮಾಯಿ ದೇವಸ್ಥಾನದ ಅಧ್ಯಕ್ಷ ಸುಂದರ ಶೆಟ್ಟಿ, ಕಾರ್ಯದರ್ಶಿ ಕಮಲಾಕ್ಷ ರಾವ್, ಕೋಶಾಧಿಕಾರಿ ರಮೇಶಚಂದ್ರ ಪಿ., ಟ್ರಸ್ಟಿಗಳಾದ ರಾಮಚಂದ್ರ, ಪದ್ಮಯ್ಯ ಬಿ. ಸುವರ್ಣ, ದಿನೇಶ್ ರಾವ್, ಗೋಪಾಲ ಕೋಟ್ಯಾನ್, ಸೂರ್ಯ ಭಟ್, ಶಿವಾನಂದ ಪೈ, ಹಾಗೂ ದೇವಸ್ಥಾನದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದು ಹಸಿರು ಅಭಿಯಾನಕ್ಕೆ ಸಾಕ್ಷಿಯಾದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದೇವಸ್ಥಾನದ ಕೋಶಾಧಿಕಾರಿ ರಮೇಶಚಂದ್ರ ಪಿ., “ದೇವಾಲಯಗಳು ಭಕ್ತಿಯ ಕೇಂದ್ರಗಳಷ್ಟೇ ಅಲ್ಲ, ಪ್ರಕೃತಿಯ ಸಂರಕ್ಷಣೆಯ ಸಂಕಲ್ಪ ಮೂಡುವ ಪುಣ್ಯಭೂಮಿಗಳಾಗಬೇಕು. ಮರ ನೆಡುವುದು ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆಯ ನಮನ. ಪರಿಸರ ಸಂರಕ್ಷಣೆಯನ್ನು ಜನಾಂದೋಲನವಾಗಿಸುವ ನಿಟ್ಟಿನಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಕೈಗೊಂಡಿರುವ ‘ಸಸ್ಯ ಶ್ಯಾಮಲಾ’ ಅಭಿಯಾನ ಸಮಾಜಕ್ಕೆ ಮಾದರಿಯಾಗಿದ್ದು, ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಪಾಲನೆ ಮಾಡುವ ಸಂಕಲ್ಪ ಕೈಗೊಳ್ಳಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ, ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವರೂಪ್ ಜೈನ್, ಶಿಕ್ಷಕಿ ರಂಜಿತ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಅಭಿಯಾನದ ಅಂಗವಾಗಿ ಮಾವು, ಬೇವು, ಪೇರಳೆ, ನೇರಳೆ ಸೇರಿದಂತೆ ಸುಮಾರು ಐವತ್ತು ಬಗೆಯ ಫಲ ಹಾಗೂ ನೆರಳು ನೀಡುವ ಸಸ್ಯಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು. ಹಸಿರಿನ ಮಹತ್ವವನ್ನು ಸಾರಿದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ಸಾಹಭರಿತ ಸ್ಪಂದನೆ ವ್ಯಕ್ತವಾಯಿತು.

Related posts

ಕುಸಿದು ಬಿದ್ದು ಮೃತ್ಯು

Madhyama Bimba

ಬಿಜೆಪಿಗರಿಗೆ ದೇಶಕ್ಕಿಂತಲೂ ಮೋದಿ ಮುಖ್ಯವಾಯಿತೇ – ಪ್ರದೀಪ್ ಬೇಲಾಡಿ

Madhyama Bimba

ಯಕ್ಷತೀರ್ಥ ಸಂಭ್ರಮ 2026 ಆಮಂತ್ರಣ ಬಿಡುಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More