ಕಾರ್ಕಳಹೆಬ್ರಿ

ಶಿವಪುರ ಶಂಕರದೇವ ದೇವಸ್ಥಾನದ ಬ್ರಹ್ಮ ಕಲಶಾಭಿಷೇಕ : ಧಾರ್ಮಿಕ ಸಭೆ

ಹೆಬ್ರಿ : ಪ್ರಾಚೀನವಾದ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಮಾಡುವುದು ನಮ್ಮ ಜೀವನದ ಪುಣ್ಯ. ಅದನ್ನು ನೋಡುವುದು ಕೂಡ ನಮ್ಮ ಭಾಗ್ಯ, ಶಂಕರದೇವರ ಜೀರ್ಣೋದ್ಧಾರ ಅತ್ಯಂತ ಪುಣ್ಯದ ಸೇವೆ, ಎಲ್ಲರೂ ಒಗ್ಗೂಡಿದ್ದರಿಂದ ಭವ್ಯವಾದ ಕ್ಷೇತ್ರ ನಿರ್ಮಾಣವಾಗಿದೆ ಎಂದು ಉಡುಪಿ ವಾದಿರಾಜ ಸಂಸ್ಥಾನದ ನಿರ್ದೇಶಕರಾದ ಡಾ. ಗೋಪಾಲ ಆಚಾರ್ಯ ಹೇಳಿದರು.

ಅವರು ಜೀಣೋದ್ಧಾರ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ಧ ಶಿವಪುರ ಶಂಕರದೇವ ದೇವಸ್ಥಾನದಲ್ಲಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಶಿವದೇವರ ಸೇವಾಕಾರ್ಯದಲ್ಲಿ ಅಳಿಲ ಸೇವೆ ಮಾಡಿದರೂ ಅನಂತ ಫಲ ಪ್ರಾಪ್ತಿಯಾಗುತ್ತದೆ. ದೇವರನ್ನು ಒಲಿಸುವ ಸುಲಭ ಮಾರ್ಗ ಭಜನೆ. ಭಜನೆಯಿಂದ ವಿಭಜನೆ ಆಗುವುದಿಲ್ಲ. ಆ ಮೂಲಕ ದೇಶವೂ ಕೂಡ ವಿಭಜನೆ ಆಗುವುದಿಲ್ಲ. ತೌಳವ ಭಾಗದಲ್ಲಿ ಅಂದಿನಿಂದಲೂ ಕೇಳುತ್ತಿದ್ದ ತಾಳದ ಶಬ್ಧ ಮರೆಯಾಗಬಾರದು. ಟಿ.ವಿಯಿಂದ ದೂರವಿದ್ದು ಮನೆಮನೆಯಲ್ಲೂ ನಿರಂತರವಾಗಿ ಭಜನೆಗಳು ನಡೆಯಲಿ. ಭಜನೆ ಪರಶುರಾಮ ಕ್ಷೇತ್ರದ ವೈಭವ. ಮಕ್ಕಳಿಗೆ ತಾಳಕೊಟ್ಟು ಭಜನೆ ಕಲಿಸಿ ಎಂದು ಗೋಪಾಲ ಆಚಾರ್ಯ ಹೇಳಿದರು.

ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಶಿವಮೊಗ್ಗದ ಉದ್ಯಮಿ ಉದಯ ಕಡಂಬ ಸೂರಿಮಣ್ಣು ಮಾತನಾಡಿ ಜೀರ್ಣೋದ್ಧಾರ ನೋಡುವುದು ನಮ್ಮ ಜೀವನದ ಪುಣ್ಯ. ನಮ್ಮ ಗ್ರಾಮ ಸಣ್ಣದಾದರೂ ವೈಭವದ ಕ್ಷೇತ್ರ ನಿರ್ಮಾಣವಾಗಿರುವುದು ಕಂಡು ಮನಸ್ಸು ತುಂಬಿ ಬಂದಿದೆ. ಶಿವಪುರದ ಮಣ್ಣಿನ ಗುಣದಿಂದ ನಾವು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ನಮ್ಮ ಹೆಮ್ಮೆ ನಮ್ಮೂರಿನ ದೇವಸ್ಥಾನ ಎಂದು ಅಭಿಮಾನಪಟ್ಟರು.

ದೇವಸ್ಥಾನಬೆಟ್ಟು ಶ್ರೀನಿವಾಸ ಹೆಬ್ಬಾರ್ ಅವರು ವಿಶೇಷ ಮುತುವರ್ಜಿಯಿಂದ ಹೊಣೆಹೊತ್ತಿದ್ದರಿಂದ ನಮ್ಮೂರು ಮತ್ತು ಪರವೂರಿನ ಸರ್ವ ಭಕ್ತರು ದಾನಿಗಳ ಮಹಾ ಸಹಕಾರದಿಂದ ಜೀರ್ಣೋದ್ಧಾರ ಕಾರ್ಯ ನೆರವೇರಿದೆ ಎಂದು ಆರ್ಥಿಕ ಸಮಿತಿಯ ಅಧ್ಯಕ್ಷರಾದ ಹುಣ್ಸೆಯಡಿ ಸುರೇಶ ಶೆಟ್ಟಿ ಹೇಳಿದರು.

ಶಿವಪುರ ಸುಬ್ರಹ್ಮಣ್ಯ ನಕ್ಷತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜೀರ್ಣೋದ್ಧಾರದ ಪುಣ್ಯದ ಕಾರ್ಯದಲ್ಲಿ ಸೇವೆ ಸಲ್ಲಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿ ನಿರಂತರ ಸಹಕಾರ ನೀಡುವುದಾಗಿ ತಿಳಿಸಿದರು.

ದೇವಸ್ಥಾನಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಯಕ್ಷ ಗಾನ ವೈಭವ ಮತ್ತು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ದೇವಸ್ಥಾನಕ್ಕೆ ದೇಣಿಗೆ ನೀಡಿದ ಶಿವಮೊಗ್ಗದ ಉದ್ಯಮಿ ಉದಯ ಕಡಂಬ ಸೂರಿಮಣ್ಣು, ಸೂರಿಮಣ್ಣು ಶ್ರೀಧರ ಶೆಟ್ಟಿ, ಪೂನಾ ಉದ್ಯಮಿ ಹರೀಶ ಶೆಟ್ಟಿ ಚಿಟ್ಟೆಬೆಟ್ಟು, ಸುಶೀಲಾ ವಾಸು ಶೆಟ್ಟಿ, ಉದ್ಯಮಿ ಪೆರ್ಡೂರು ವಾಂಟ್ಯಾಳ ಶಬರೀಶ್ ಸುವರ್ಣ, ರಾಮಚಂದ್ರ ಉಡುಪ ಹೆಬ್ರಿ, ಕೋಟಿ ಪೂಜಾರಿ ಶಿವಪುರ, ಗಿರಿಯ ನಾಯ್ಕ್ ಗದ್ದಿಗೆಮನೆ ಪಡುಕುಬ್ರಿ, ಪ್ರಭಾಕರ ಭಂಡಾರಿ ಶಿವಪುರ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಿಶ್ವನಾಥ ನಾಯಕ್, ಸಮಿತಿಯ ಸದಸ್ಯರು, ಉಪ ಸಮಿತಿಗಳು ಪ್ರಮುಖರು ಸದಸ್ಯರು ಉಪಸ್ಥಿತರಿದ್ದರು.

ಜಗನ್ನಾಥ ಕುಲಾಲ್, ಸದಾನಂದ ಪೂಜಾರಿ, ರಾಧಿಕಾ ಅಡಿಗ, ರಾಘವೇಂದ್ರ ಪ್ರಭು, ಶಿವಪ್ರಸಾದ್ ಅಡಿಗ, ರಮಾನಂದ ಶೆಟ್ಟಿ ಶಿವಪುರ ಮತ್ತಿತರರು ಸಹಕರಿಸಿದರು. ಶಿಕ್ಷಕ ಮಂಜುನಾಥ ಕುಲಾಲ್ ಶಿವಪುರ ನಿರೂಪಿಸಿ ವಿಶ್ವನಾಥ ನಾಯಕ್ ಸ್ವಾಗತಿಸಿದರು. ಸುರೇಶ ಶೆಟ್ಟಿ ಶಿವಪುರ ವಂದಿಸಿದರು.

Related posts

ಪೋಷಕರೇ ಮಕ್ಕಳಿಗೆ ಆದರ್ಶ: ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ

Madhyama Bimba

ಆರೋಗ್ಯ ಇಲಾಖೆಯ ವಿವಿಧ ಹುದ್ದೆ: ಅರ್ಜಿ ಆಹ್ವಾನ

Madhyama Bimba

ಕ್ರೈಸ್ಟ್‌ಕಿಂಗ್: ಪ್ರೌಢಶಾಲಾ ವಿಭಾಗದ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಗಣ್ಯ ಪೂಜಾರಿ ರಾಜ್ಯಮಟ್ಟಕ್ಕೆ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More