Blog

ಬಡ ರೋಗಿಗೆ ಮರು ಜನ್ಮ ನೀಡಿದ ವೆನ್ಲಾಕ್ ವೈದ್ಯರಿಗೆ ಸನ್ಮಾನ

🔴ಬಡ ರೋಗಿಗೆ ಮರುಜನ್ಮ ನೀಡಿದ ವೆನ್ಲಾಕ್ ವೈದ್ಯರು: ಡಾ. ಸಾಧನ್ ಜಿ ತಂಡಕ್ಕೆ ಸಾಣೂರು ಗಣ್ಯರಿಂದ ಸನ್ಮಾನ

ಕಾರ್ಕಳ: ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಕುಟುಂಬದ ವ್ಯಕ್ತಿಯೊಬ್ಬರ ಕಾಲಿನ ಗಂಭೀರ ಸಮಸ್ಯೆಗೆ ಸ್ಪಂದಿಸಿ, ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ವೈದ್ಯರು ಮಾನವೀಯತೆ ಮೆರೆದಿದ್ದಾರೆ.
ಸಾಣೂರು ಗ್ರಾಮದ ಇಂದಿರಾನಗರ ನಿವಾಸಿ, 40 ವರ್ಷ ಪ್ರಾಯದ ಜಯಕುಮಾರ್ ಅವರು ಕಳೆದ ಕೆಲವು ತಿಂಗಳುಗಳಿಂದ ‘ಗ್ಯಾಂಗ್ರಿನ್’ ಎಂಬ ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿದ್ದರು. ಬಡತನದ ಕಾರಣದಿಂದಾಗಿ ದುಬಾರಿ ಚಿಕಿತ್ಸೆ ಪಡೆಯಲಾಗದೆ ಸಂಕಷ್ಟದಲ್ಲಿದ್ದ ಇವರಿಗೆ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಪರಿಣಿತ ಶಸ್ತ್ರಚಿಕಿತ್ಸಕ ಡಾ. ಸಾಧನ್ ಜಿ ಹಾಗೂ ಅವರ ವೈದ್ಯಕೀಯ ತಂಡವು ಸತತ ಮೂರು ತಿಂಗಳ ಕಾಲ ಅತ್ಯುತ್ತಮ ಚಿಕಿತ್ಸೆ ನೀಡಿ, ಶಸ್ತ್ರಚಿಕಿತ್ಸೆಯ ಮೂಲಕ ಅವರನ್ನು ಸಂಪೂರ್ಣ ಗುಣಮುಖರನ್ನಾಗಿಸಿದ್ದಾರೆ.
ವೈದ್ಯರ ಈ ಶ್ಲಾಘನೀಯ ಸೇವೆಯನ್ನು ಗುರುತಿಸಿ, ಕಾರ್ಕಳ ತಾಲೂಕು ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾದ ಅಬ್ದುಲ್ಲಾ ಸಾಣೂರು, ಸೇವಾದಳದ ಸದಸ್ಯರಾದ ಅಮೀರ್ ಹುಸೇನ್ ಹಾಗೂ ಉದ್ಯಮಿ ಸಮದ್ ಖಾನ್ ಅವರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ, ಡಾ. ಸಾಧನ್ ಜಿ ಹಾಗೂ ಅವರ ವೈದ್ಯಕೀಯ ತಂಡಕ್ಕೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಜಯಕುಮಾರ್ ಅವರ ಚಿಕಿತ್ಸೆಯ ಉದ್ದಕ್ಕೂ ಅಬ್ದುಲ್ಲಾ ಸಾಣೂರು, ಅಮೀರ್ ಹುಸೇನ್ ಅವರು ಮಾರ್ಗದರ್ಶನ ನೀಡಿ, ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದರು. ಸರಕಾರಿ ಆಸ್ಪತ್ರೆಯಲ್ಲಿ ಇಂತಹ ಉನ್ನತ ಮಟ್ಟದ ಮತ್ತು ಮಾನವೀಯ ಕಾಳಜಿಯ ಸೇವೆ ದೊರೆಯುತ್ತಿರುವುದು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

Related posts

ಬೈಲೂರು: ಉಚಿತ ಕನ್ನಡಕ ವಿತರಣೆ

Madhyama Bimba

ಸುಳ್ಳು ಸುದ್ದಿ ಹಂಚುವ ಶಾಸಕ ಸುನಿಲ್

Madhyama Bimba

ಹೆಬ್ರಿ ಜೀರ್ಣೋದ್ದಾರಕ್ಕೆ ಭೂಮಿ ಪೂಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More