ಮೂಡುಬಿದಿರೆ : ವಜ್ರಮಹೋತ್ಸವ ಸಂಭ್ರಮದಲ್ಲಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ಮಹಾವೀರ ಕಾಲೇಜಿನ ಉದ್ಯೋಗಾಕಾಂಕ್ಷಿ ಅಂತಿಮ ಪದವಿ ವಿದ್ಯಾರ್ಥಿಗಳು ಸತತ ಎರಡನೇ ವರ್ಷವೂ 100 ಶೇ. ಉದ್ಯೋಗ ನೇಮಕಾತಿ ಸಾಧಿಸಿದ್ದಾರೆ.

ಕಾಲೇಜಿನ ಪ್ಲೇಸ್ಮೆಂಟ್ ಸೆಲ್, ಆಂಗ್ಲ ಭಾಷಾ ವಿಭಾಗ, ಹಳೆ ವಿದ್ಯಾರ್ಥಿಗಳು ಮುಂತಾದವರ ಒಟ್ಟುಗೂಡುವಿಕೆಯಲ್ಲಿ ಉದ್ಯೋಗ ಪಡೆಯಬಯಸಿ ಪ್ಲೇಸ್ ಮೆಂಟ್ ಸೆಲ್ ನಲ್ಲಿ ನೋಂದಾವಣೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಲಾಗಿದ್ದು, 2025-2 6ರ ಶೈಕ್ಷಣಿಕ ವರ್ಷಾಂತ್ಯದಲ್ಲಿ (ಏಪ್ರಿಲ್-ಮೇ) ರಾಜ್ಯದ ಅನೇಕ ಪ್ರತಿಷ್ಠಿತ ಕಂಪನಿಗಳು ಸಂದರ್ಶನ ನಡೆಸಿ ವಿದ್ಯಾರ್ಥಿಗಳನ್ನು ತಮ್ಮ ಕಂಪನಿಗಳಲ್ಲಿ ಹುದ್ದೆಗೆ ನೇಮಿಸಿಕೊಂಡಿವೆ.
2025-2 6ರ ಶೈಕ್ಷಣಿಕ ವರ್ಷದ ಆರಂಭದಿಂದಲೇ ಪ್ರತೀ ವಾರವೂ ಉದ್ಯೋಗಕ್ಕೆ ಸೇರಬಯಸಿ ನೋಂದಾವಣೆ ಮಾಡಿಕೊಂಡ ಪದವಿ ವಿಭಾಗದ ಅಭ್ಯರ್ಥಿಗಳಿಗೆ ಪ್ರತೀವಾರಕ್ಕೆ ಒಂದರಂತೆ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳ ತರಬೇತಿ ಕಾರ್ಯಕ್ರಮಗಳು ಮಾಹೆ ಮಣಿಪಾಲ ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ ನಡೆದವು. ಒಂದು ತಿಂಗಳ ಅವಧಿಯ ಆಂಗ್ಲಭಾಷಾ ಸಂವಹನ ಕೌಶಲ್ಯಾಭಿವೃದ್ಧಿ ತರಗತಿಗಳು ನಡೆದವು. ಇವೆಲ್ಲದರ ಪರಿಣಾಮವಾಗಿ ರಾಜ್ಯದ ಅನೇಕ ಪ್ರಸಿದ್ಧ ಕಂಪನಿಗಳು ಕಾಲೇಜಿನ ಆವರಣದಲ್ಲಿ ಈ ಶೈಕ್ಷಣಿಕ ವರ್ಷದ ಕೊನೆಯಲ್ಲಿ ವಿದ್ಯಾರ್ಥಿಗಳ ಸಂದರ್ಶನ ನಡೆಸಿ ವಿವಿಧ ಉದ್ಯೋಗಗಳಿಗೆ ಅವರುಗಳನ್ನು ನೇಮಿಸಿಕೊಂಡಿವೆ.
ಅಂತಿಮ ಪದವಿಯ ಕೆಲವು ವಿದ್ಯಾರ್ಥಿಗಳು ಎರಡಕ್ಕಿಂತ ಹೆಚ್ಚು ಉದ್ಯೋಗಗಳ ಆಫರ್ ಗಳನ್ನು ಹಾಗೂ ಹಲವು ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚಿನ ಉದ್ಯೋಗದ ಆಫರ್ ಪಡೆದಿರುವುದು ಕಾಲೇಜು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ನೀಡುತ್ತಿರುವ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಗಳ ಮಹತ್ವವನ್ನು ತಿಳಿಸುತ್ತದೆ. ಈ ಮೂಲಕ ಶ್ರೀ ಮಹಾವೀರ ಕಾಲೇಜು ಸತತ ಎರಡನೇ ವರ್ಷವೂ ವಿದ್ಯಾರ್ಥಿಗಳ ಉದ್ಯೋಗ ನೇಮಕಾತಿಯಲ್ಲಿ 100 ಶೇ. ಸಾಧನೆ ಆಗಿರುತ್ತದೆಎಂದು ಕಾಲೇಜಿನ ಪ್ರಾಂಶುಪಾಲ ಡಾ ರಾಧಾಕೃಷ್ಣ ಶೆಟ್ಟಿಯವರು ತಿಳಿಸಿದ್ದಾರೆ.
