ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ರಿಯಾಶೀಲ ಸಂಘಟನೆ ಯುವವಾಹಿನಿ (ರಿ.) ಯ ಮೂಡುಬಿದಿರೆ ಘಟಕವು “ಭರವಸೆಯ ಬದುಕಿಗೊಂದು ಸೂರು – 2026” ಯೋಜನೆಯಡಿ ಬಡ ಕುಟುಂಬಗಳಿಗೆ ಆಶ್ರಯದ ಮನೆ ನಿರ್ಮಿಸುವ ಮಹತ್ವದ ಕಾರ್ಯವನ್ನು ಕೈಗೊಂಡಿದೆ. ಈ ಯೋಜನೆಯಡಿ ಬಾಲ ಪ್ರತಿಭೆ ಮೂಡುಮಾರ್ನಾಡಿನ ಅಭಿಷ್ ಪೂಜಾರಿ ಅವರ ಕುಟುಂಬಕ್ಕೆ ಮನೆ ನಿರ್ಮಾಣ ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿದೆ.

ಮೂಡುಬಿದಿರೆ ತಾಲೂಕಿನ ಮೂಡುಮಾರ್ನಾಡು ಪರಿಸರದ ವಿಶ್ವನಾಥ್ – ಸುಮಿತ್ರಾ ದಂಪತಿಗಳ ಕುಟುಂಬ ಹಲವು ವರ್ಷಗಳಿಂದ ಶಿಥಿಲಾವಸ್ಥೆಯ ಮನೆಯಲ್ಲಿ ಜೀವನ ಸಾಗಿಸುತ್ತಿತ್ತು. ಮಳೆಗಾಲ ಬಂದಾಗ ಮನೆಯ ಚಾವಣಿಯಿಂದ ನೀರು ಸೋರಿಕೆಯಾಗುವುದು, ಬಿರುಕು ಬಿಟ್ಟ ಗೋಡೆಗಳ ನಡುವೆ ಭಯದಿಂದ ರಾತ್ರಿ ಕಳೆಯುವುದು ಇವರ ದಿನನಿತ್ಯದ ಬದುಕಾಗಿತ್ತು. ಒಂದೇ ಕೋಣೆಯಲ್ಲಿ ಐವರು ವಾಸಿಸುವ ಪರಿಸ್ಥಿತಿ ಕುಟುಂಬದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿತ್ತು. ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ವಿಶ್ವನಾಥ್ ಅವರು ಅಲ್ಪ ಆದಾಯದಲ್ಲಿ ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ನಿರ್ವಹಣೆಯನ್ನು ಕಷ್ಟಪಟ್ಟು ನಡೆಸುತ್ತಿದ್ದರು.

ಕುಟುಂಬದ ಕಿರಿಯ ಪುತ್ರ ಅಭಿಷ್ ಪೂಜಾರಿ ಬಾಲ್ಯದಲ್ಲೇ ತನ್ನ ಅದ್ಭುತ ನಟನಾ ಪ್ರತಿಭೆಯಿಂದ ಜನಮನ ಸೆಳೆದಿದ್ದಾರೆ. ಜೀ ಕನ್ನಡ ವಾಹಿನಿಯ ಜನಪ್ರಿಯ “ಡ್ರಾಮಾ ಜೂನಿಯರ್ಸ್” ಕಾರ್ಯಕ್ರಮದಲ್ಲಿ ಭಾಗವಹಿಸಿ “ಕರಾವಳಿ ಕಿಲಾಡಿ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು, ತಮ್ಮ ನೈಜ ಅಭಿನಯ, ಹಾಸ್ಯಪ್ರಜ್ಞೆ ಹಾಗೂ ಕಲಾ ಚಾತುರ್ಯದಿಂದ ಕರಾವಳಿಯ ಮನೆಮಾತಾಗಿದ್ದಾರೆ. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಮತ್ತು ಗೌರವಗಳನ್ನು ತಮ್ಮದಾಗಿಸಿಕೊಂಡಿರುವ ಅಭಿಷ್, ಭವಿಷ್ಯದ ಭರವಸೆಯ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ.
ವೇದಿಕೆಯಲ್ಲಿ ಜನರಿಗೆ ನಗು ಮತ್ತು ಮನರಂಜನೆ ನೀಡುವ ಈ ಬಾಲ ಪ್ರತಿಭೆಯ ಮನೆಯ ನಿಜ ಜೀವನ ಮಾತ್ರ ಸಂಕಷ್ಟಗಳಿಂದ ಕೂಡಿದೆ. ಈ ಬಗ್ಗೆ ಮಾಹಿತಿ ತಿಳಿದುಕೊಂಡ ಯುವವಾಹಿನಿ (ರಿ.) ಮೂಡುಬಿದಿರೆ ಘಟಕವು ಮನೆ ನಿರ್ಮಾಣದ ಹೊಣೆ ಹೊತ್ತು ಸಾರ್ವಜನಿಕರ ಸಹಕಾರದೊಂದಿಗೆ ಕಾಮಗಾರಿಯನ್ನು ಆರಂಭಿಸಿದೆ. ಈಗಾಗಲೇ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಹಲವಾರು ದಾನಿಗಳು ಮತ್ತು ಕಲಾಭಿಮಾನಿಗಳು ನೆರವಿನ ಹಸ್ತ ಚಾಚಿದ್ದಾರೆ.
ಆದರೆ ಮನೆ ಸಂಪೂರ್ಣ ಪೂರ್ಣಗೊಳ್ಳಲು ಇನ್ನೂ ಹೆಚ್ಚಿನ ಸಹಾಯಧನದ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಸಮಾಜದ ದಾನಿಗಳು, ಅಭಿಮಾನಿಗಳು ಹಾಗೂ ಸಾರ್ವಜನಿಕರು ತಮ್ಮಿಂದಾದ ಸಹಾಯಧನ ನೀಡಿ ಈ ಕುಟುಂಬದ ಬದುಕಿಗೆ ಶಾಶ್ವತ ಸೂರಾಗುವಂತೆ ಸಂಘಟನೆಯವರು ಮನವಿ ಮಾಡಿದ್ದಾರೆ.
