ಕಾರ್ಕಳ

ಕ್ರೈಸ್ಟ್‌ಕಿಂಗ್: ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಆರಂಭೋತ್ಸವ

ಕಾರ್ಕಳ: ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಆರಂಭೋತ್ಸವ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.


ಕಾರ್ಕಳ ಕ್ರೈಸ್ಟ್‌ಕಿಂಗ್ ಚರ್ಚ್‌ನ ಧರ್ಮಗುರುಗಳಾದ ರೆ.ಫಾ.ಕ್ಲೆಮೆಂಟ್ ಮಸ್ಕರೇನ್ಹಸ್ ಅವರು ದೀಪ ಬೆಳಗುವುದರ ಮೂಲಕ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಆರಂಭೋತ್ಸವವನ್ನು ನಡೆಸಿಕೊಟ್ಟರು. ನಂತರ ಮಾತನಾಡಿದ ಅವರು “ವಿದ್ಯಾರ್ಥಿಗಳು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳಬೇಕಾದರೆ ನಿರಂತರ ಪರಿಶ್ರಮಿಗಳಾಗಬೇಕು. ನಾವು ಭಾವನೆಗಳಿಲ್ಲದ ರೊಬೋಟ್‌ಗಳಾಗದೆ ಮೃದು ಹೃದಯದವರಾಗಬೇಕು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಮಾಜದಲ್ಲಿ ಸಹಬಾಳ್ವೆ ನಡೆಸಬೇಕು” ಎಂದು ಹೇಳಿದರು.

ಮೂಡಬಿದ್ರೆ ಜೈನ್ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಖ್ಯಾತ ವಿದ್ವಾಂಸ ಮುನಿರಾಜ ರೆಂಜಾಳ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಮಾತನಾಡಿ “ಹೆತ್ತವರು ಮಕ್ಕಳ ಹೆಸರಿನಲ್ಲಿ ಚಿನ್ನ, ಆಸ್ತಿಗಳನ್ನು ಮಾಡುವ ಬದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದರ ಕಡೆ ಗಮನ ಕೊಡಬೇಕು. ಈ ವಯಸ್ಸಿನಲ್ಲಿ ಹೆತ್ತವರು ಮಕ್ಕಳಿಗೆ ಅಗತ್ಯವಿರುವ ಪ್ರೀತಿಯನ್ನು ಕೊಡಬೇಕು ಜೊತೆಗೆ ಮಕ್ಕಳನ್ನು ಮನೆಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳು ವಿದ್ಯಾವಂತರಾಗಿ ತಮ್ಮ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಂಡು ತಾವೂ ಚೆನ್ನಾಗಿ ಬದುಕಬೇಕು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಸದಸ್ಯ ಡಾ ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಜಾತಿ, ಧರ್ಮ, ಅಂತಸ್ತುಗಳೆಂಬ ಭೇದ ರಹಿತ ಶಿಕ್ಷಣ ನಮ್ಮ ಸಂಸ್ಥೆಯ ಆಶಯ, ಪ್ರತೀ ವಿದ್ಯಾರ್ಥಿಗೆ ಶ್ರೇಷ್ಟ ದರ್ಜೆಯ ಶಿಕ್ಷಣ ಸಿಗುವಂತಾಗಬೇಕು. ಇದು ನಮ್ಮ ಗುರಿ. ಈ ಜಗತ್ತಿನಲ್ಲಿ ತನ್ನನ್ನು ತಾನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಲ್ಲವನು ಜೀವನದಲ್ಲಿ ಯಶಸ್ವಿಯಾಗುತ್ತಾನೆ” ಎಂದು ಹೇಳಿದರು.

ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು. ಸಂಸ್ಥೆಯ ಭೌತಶಾಸ್ತ್ರ ಉಪನ್ಯಾಸಕ ಡಾ.ಅನಂತ್ ಪೈ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡಿದರು.

ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕ್ರಿಸ್ತೋಫರ್ ಕೋಟ್ಯಾನ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಣಿತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಭಾರತಿ ನಾಯಕ್ ಸ್ವಾಗತಿಸಿ ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 

Related posts

ಕಾರ್ಕಳದಲ್ಲಿ ಮೇ.24 ರಂದು ಜೈ ಭೀಮ್ ಯುವ ಸೇನಾ ಟ್ರಸ್ಟ್ ನ ದ್ವಿತೀಯ ವರ್ಷದ ಸಂಭ್ರಮಾಚರಣೆ

Madhyama Bimba

ರಾಷ್ಟ್ರ ಮಟ್ಟದ ತಾಂತ್ರಿಕ ಮಾದರಿ ಪ್ರದರ್ಶನ ಸ್ಪರ್ಧೆ: ಹಿರ್ಗಾನದ ರಿತಿಕ್ ಪೂಜಾರಿ ಪ್ರಥಮ

Madhyama Bimba

ಫೆಲೋಶಿಪ್: ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More