ಮೂಡುಬಿದಿರೆ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಾಗೂ ಕಲೆ, ಸಾಹಿತ್ಯ, ಭಜನಾ ಮತ್ತು ನೃತ್ಯ ತಂಡಗಳ ರಚನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜೂ. 21ರಂದು ನಡೆಯಿತು.
ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಮಾರೂರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿ ಮೂಲಕ ಕಾರ್ಯಕ್ರಮದ ಉದ್ದೇಶ ಹಾಗೂ ಕಲೆ, ಸಾಹಿತ್ಯ, ಭಜನಾ ಮತ್ತು ನೃತ್ಯ ತಂಡಗಳ ರಚನೆಯ ಅಗತ್ಯತೆ, ಮುಂದಿನ ಹಂತದ ಕಾರ್ಯಯೋಜನೆ ಹಾಗೂ ತಂಡಗಳ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆರ್.ಜೆ. ಹಾಗೂ ಸಾಹಿತಿಗಳಾದ ವಿನೋದ್ ಕುಂಪಲ ಮಾತನಾಡಿ ಸಮಯ ಪ್ರಜ್ಞೆಯೊಂದಿಗೆ ಯುವ ಪ್ರತಿಭೆಗಳು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ನಿರಂತರ ಸಾಧನೆಯತ್ತ ಹೆಜ್ಜೆಯಿಡಬೇಕೆಂದು ಕರೆ ನೀಡಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶುಭಕರ ಪೂಜಾರಿ ವೇಣೂರು ಅವರು ಸಂಘಟನೆಯ ಚಟುವಟಿಕೆಗಳು ಹಾಗೂ ಯುವಜನರ ಪಾತ್ರದ ಕುರಿತು ಮಾತನಾಡಿದರು.
ಸನ್ಮಾನಿತರಾದ ಸುಧೀಂದ್ರ ಜೆ. ಶಾಂತಿ ಅವರೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಯುವವಾಹಿನಿಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಮಾಜಕಾರ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಧೀಂದ್ರ ಜೆ. ಶಾಂತಿ, ಅಗ್ನಿವೀರ್ ಜೆಡಿ ಹುದ್ದೆಗೆ ಆಯ್ಕೆಯಾದ ವಿರಾಜ್ ಪೂಜಾರಿ ಪಣಪಿಲ, ಭಜನಾ ಕ್ಷೇತ್ರದ ಕು. ಹರ್ಷಾ ಯು. ಕೋಟ್ಯಾನ್, ನೃತ್ಯ ಹಾಗೂ ಕಲೆ ಕ್ಷೇತ್ರದ ಕೀರ್ತನ್ ಎಸ್. ಶಾಂತಿ ಹಾಗೂ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕು. ಪೂರ್ಣಿಮಾ ಕೋಟ್ಯಾನ್ ಮಾರ್ನಾಡು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನೂತನ ಸದಸ್ಯರ ಸೇರ್ಪಡೆಯೂ ನಡೆಯಿತು. ಕಾರ್ಯಕ್ರಮದಲ್ಲಿ ಯುವಸ್ಪಂದನ ಯೋಜನೆಯ ಅಧ್ಯಕ್ಷರಾದ ನವಾನಂದ ಮೂಡುಬಿದಿರೆ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಶ್ರೀಮತಿ ಪ್ರತಿಭಾ ಸುರೇಶ್, ಕೋಶಾಧಿಕಾರಿಯಾದ ಶ್ರೀಮತಿ ಜಯಶೀಲಾ ಪೂಜಾರಿ ಹಾಗೂ ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.
ಪೂರ್ಣಿಮ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ. ಸ್ವಾಗತಿಸಿದರು.
ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಧನ್ಯವಾದ ಸಲ್ಲಿಸಿದರು.
