• ಕರಾವಳಿಯ ಭಾಗದಲ್ಲಿಯೂ ಒಂದು ರಂಗಾಯಣವನ್ನು ಆರಂಭಿಸ ಬೇಕೆನ್ನುವುದು ಕೀರ್ತಿಶೇಷ ಬಿ.ವಿ ಕಾರಂತರ ಕನಸುಗಳಲ್ಲಿ ಒಂದಾಗಿತ್ತು ಮತ್ತು ಆ ಪ್ರಯತ್ನ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಸಾಕಾರಗೊಂಡಿದೆ.
• ಮೈಸೂರು ರಂಗಾಯಣವನ್ನು ಸ್ಥಾಪಿಸಿದ ಬಳಿಕ ಕರ್ನಾಟಕದಲ್ಲಿ ಇಂತಹ ಇನ್ನೂ ನಾಲ್ಕು ರಂಗಾಯಣಗಳ ಅಗತ್ಯವಿದೆ ಎನ್ನುವುದು ಕಾರಂತರ ಇಂಗಿತವಾಗಿತ್ತು. ಇದು ಕರ್ನಾಟಕದ ನಾಲ್ಕು ದಿಕ್ಕಿನ ನೆಲದ ಆಸ್ಮಿತೆಯನ್ನು ಸ್ಪುರಿಸಬೇಕೆನ್ನುವುದು ಅವರ ಆಶಯವಾಗಿತ್ತು.
• ಇಂದು ನಾಲ್ಕು ರಂಗಾಯಣಗಳ ಬದಲಿಗೆ ಆರು ರಂಗಾಯಣಗಳು ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕಿನಲ್ಲಿ ಭೌತಿಕವಾಗಿ ಆರಂಭಗೊಂಡ ರಂಗಾಯಣವು ಒಂದು.
• ಪ್ರಾರಂಭಿಕ ದಿನಗಳಲ್ಲಿ ದ.ಕ ಜಿಲ್ಲೆ, ಉ.ಕ ಜಿಲ್ಲೆಯ ರಂಗಕಲಾವಿದರನ್ನು, ರಂಗ ಚಿಂತಕರನ್ನು ಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ತರಾತುರಿಯಲ್ಲಿ ರಂಗಾಯಣವನ್ನು ಕಾಕ೯ಳದಲ್ಲಿ ಪ್ರತಿಷ್ಟಾಪಿಸಿ ರಂಗಸಮಾಜ ನಗೆ ಪಾಟಲಾದದ್ದು ಇದೆ.
• ಇದರ ಜೊತೆಗೆ ರಂಗಭೂಮಿಯ ಕಲಾವಿದರು, ತಂತ್ರಜ್ಞರ ಅಭಿಪ್ರಾಯವನ್ನು ಸಂಗ್ರಹಿಸಿದೆ ಏಕಾಏಕಿ ಅದಕ್ಕೆ ಯಕ್ಷ ರಂಗಾಯಣವೆಂಬ ನಾಮಧೇಯವನ್ನು ಅಂಟಿಸಿದರು. ಯಾವಾಗ ಅದು ಯಕ್ಷಗಾನಕ್ಕೆ ಸಂಬಂಧಿಸಿದ ರಂಗಾಯಣ ಎಂದು ಗುರುತಿಸಲ್ಪಟ್ಟಿತೋ, ಆ ಬಳಿಕ ರಂಗ ಕಲಾವಿದರು, ತಂತ್ರಜ್ಞರು ಯಕ್ಷರಂಗಾಯಣದ ಬಳಿಗೆ ಸುಳಿಯಲಿಲ್ಲ. ಮೂರು ಜಿಲ್ಲೆಗಳಲ್ಲಿ ಕಾರ್ಯಾಚರಿಸಬೇಕಾದ ಯಕ್ಷರಂಗಾಯಣ ಕನಿಷ್ಟ ಉಡುಪಿ ಜಿಲ್ಲೆಯಲ್ಲಿಯೇ ಆರಕ್ಕೆ ಏರಲಾಗದೆ ಮೂರಕ್ಕೆ ಇಳಿಯಲಾಗದೆ ಪರದಾಡಿದೆ.
• ಇದನ್ನು ಪ್ರಾರಂಭಿಕ ದಿನದ ಕೊರತೆಗಳೆಂದು ಕ್ಷಮಿಸಬಹುದು ಆದರೆ ಆ ಸಂದರ್ಭದಲ್ಲಿ ಅದರ ನೇತ್ರತ್ವವನ್ನು ವಹಿಸಿದ ನಿರ್ದೇಶಕರೋ/ಸಮನ್ವಯಕಾರರೋ ದ.ಕ ಜಿಲ್ಲೆಯ, ಉ.ಕ ಜಿಲ್ಲೆಯ ರಂಗಕಲಾವಿದರ, ತಂಡಗಳ, ತಂತ್ರಜ್ಞರ ಸಮುದಾಯದ ಸಲಹೆಗಳನ್ನು ಕೇಳಿಸಿ ಕೊಳ್ಳಲೇ ಇಲ್ಲ. ದೊರಕಿರುವ ರಂಗಾಯಣವನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎನ್ನುವ ನಿರ್ವಹಣಾ ಜ್ಞಾನದ ಕೊರತೆಯಿಂದ ಕಾರ್ಕಳದ ರಂಗಾಯಣವನ್ನು ಕೆಡವಿದರು.
• ರಂಗಾಯಣ ಒಂದು ರಂಗಸಮುದಾಯದ ಜವಬ್ದಾರಿ. ಅದನ್ನು ಏಕೋಪಧ್ಯಾಯ ಶಾಲೆಯ ಮಾದರಿಯಲ್ಲಿ ನಡೆಸಲಾಗದು ಎನ್ನುವ ಕಿಂಚಿತ್ತು ಜ್ಞಾನವಿಲ್ಲದ ಜನರ ಕೈಯಲ್ಲಿ ಕಾರ್ಕಳ ರಂಗಾಯಣ ನರಳಿದೆ.
• ಇತ್ತೀಚೆಗೆ ಎರಡು ವರ್ಷಗಳ ಹಿಂದೆ ನೇಮಕಗೊಂಡ ನಿರ್ದೇಶಕ ವೆಂಕಟರಮಣ ಐತಾಳರು ಸತತವಾಗಿ ಇತರೇ ಜಿಲ್ಲೆಯ [ಮೂರು ಜಿಲ್ಲೆಯ] ಕಲಾವಿದರುಗಳನ್ನು, ತಂತ್ರಜ್ಞರುಗಳನ್ನು ಅಲ್ಲಲ್ಲಿ ಸೇರಿಸಿ ಆ ಮೂಲಕ ಕಾರ್ಕಳ ರಂಗಾಯಣದ ಚಟುವಟಿಕೆಗಳಿಗೆ ಒದಗಿಸದ ಬೇಕಾದ ಬೆಂಬಲಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದರು. ಮುಂದಿನ ಯೋಚನೆ, ಯೋಜನೆಗಳು ಮತ್ತು ಕನಸುಗಳನ್ನು ಹಂಚಿಕೊಂಡರು. ಆಹವಾಲುಗಳನ್ನು ಆಲಿಸಿದರು.
• ಈ ಚರ್ಚೆಯ ಸಂದರ್ಭದಲ್ಲಿಯೇ ರಂಗಭೂಮಿಯ [ವೃತ್ತಿಪರ ಮತ್ತು ಹವ್ಯಾಸಿ] ಕಲಾವಿದ ಸಮುದಾಯ ಯಕ್ಷ ರಂಗಾಯಣ ಸೂಕ್ತ ನಾಮಧೇಯವಲ್ಲ ಅದನ್ನು ಬದಲಿಸಿ ಕರಾವಳಿ ರಂಗಾಯಣ, ಉಡುಪಿ ರಂಗಾಯಣ ಎಂದು ಹೆಸರಿಡುವ ಅಭಿಪ್ರಾಯವನ್ನು ನೀಡಿದರು. ಈ ಒಟ್ಟು ಚರ್ಚೆಯ ವರದಿಯನ್ನು ರಂಗಸಮಾಜಕ್ಕೆ ಒದಗಿಸಲಾಗಿದ್ದು ಅವರ ಶಿಪಾರಸ್ಸಿನ ಮೇರೆಗೆ ಪ್ರಸಕ್ತ ಸರ್ಕಾರ ಯಕ್ಷ ರಂಗಾಯಣವನ್ನು ಕರಾವಳಿ ರಂಗಾಯಣವೆಂದು ಬದಲಾಯಿಸಿದೆ.
• ಈ ಬದಲಾವಣೆಯು ಮೂರು ಜಿಲ್ಲೆಯ ರಂಗಭೂಮಿಯ ಕಲಾವಿದರಿಗೆ, ತಂತ್ರಜ್ಞರಿಗೆ ಸಂತಸ ತಂದಿದೆ. ಮೂರು ಜಿಲ್ಲೆಯ ಜನಪ್ರತಿನಿಧಿಗಳು, ಶಾಸಕರುಗಳು, [ಒಂದಿಬ್ಬರನ್ನು ಹೊರತು ಪಡಿಸಿದರೆ] ಸಹಮತ ಸೂಚಿಸಿದ್ದಾರೆ.
• ಆದರೆ ಸರ್ಕಾರದ ಈ ತೀರ್ಮಾನವನ್ನು ವಿರೋಧಿಸಿ, ಯಕ್ಷಗಾನ ಕಲಾವಿದರ ಮತ್ತು ರಂಗಕಲಾವಿದರ ನಡುವೆ ವೈಮನಸ್ಯವನ್ನು ತಂದು ಕಲಾವಿದರುಗಳು ಹೊಡೆದಾಡುವಂತೆ ಮಾಡುವ ಕಿಡಿಗೇಡಿ ಕೃತ್ಯವೊಂದು ಬೆಳಕಿಗೆ ಬಂದಿದೆ.
• ಸೋಶಲ್ ಮೀಡಿಯದಲ್ಲಿ ಹರಿಯ ಬಿಟ್ಟ ಪೋಸ್ಟರ್ ಒಂದನ್ನು ಗಮನಿಸಿದರೆ ಅದು ಯಕ್ಷ ರಂಗಾಯಣದಿಂದ ಕರಾವಳಿ ರಂಗಾಯಣ ಹೆಸರಿಡುವ ಮೂಲಕ ಯಕ್ಷಗಾನಕ್ಕೆ ಅವಮಾನ ಮಾಡಲಾಗಿದೆ ಎಂದು ಪ್ರತಿಬಿಂಬಿಸುವ ಪ್ರಯತ್ನವನ್ನು ಯಾರೋ ರಾಜಕೀಯ ದುರುದ್ದೇಶದಿಂದ ನಡೆಸುವಂತೆ ಕಂಡು ಬಂದಿದೆ. ಕಲಾವಿದರು ರಂಗಭೂಮಿಯವರೇ ಆಗಿರಲಿ ಯಕ್ಷಗಾನದವರೇ ಆಗಿರಲಿ ಅವರ ನಡುವೆ ತಂದಿಟ್ಟು ಎತ್ತಿಕಟ್ಟುವ ಹುನ್ನಾರವನ್ನು ಕಲಾವಿದರಾದ ನಾವು ಅರ್ಥಮಾಡಿಕೊಳ್ಳಬೇಕು.
• ಯಕ್ಷ ರಂಗಾಯಣ ಎಂದು ಹೆಸರಿಟ್ಟ ಕೂಡಲೇ ಅದು ಯಕ್ಷಗಾನವನ್ನು ಉಳಿಸಿ ಬೆಳೆಸುವ ಘಟಕವಾಗಿ ರೂಪುಗೊಳ್ಳುವುದಿಲ್ಲ. ರಂಗಭೂಮಿ ಕಲಾವಿದರಿಗೆ ವೃತ್ತಿಪರರಾಗಿ ಕಾರ್ಯನಿರ್ವಹಿಸಲು ಅನುಕೂಲವಾದ ವಾತಾವರಣವನ್ನು ನಿರ್ಮಿಸಿಕೊಡುವಲ್ಲಿ ಪರಿಣಾಮಕಾರಿಯಾಗಿ ಅದು ಕೆಲಸಮಾಡಬೇಕು.
• ಯಕ್ಷಗಾನ ಪರಂಪರೆ ಇಂದು ಕರಾವಳಿಯಲ್ಲಿ ಉಳಿದಿದ್ದರೆ ಅದು ಇಲ್ಲಿನ ಯಕ್ಷಗಾನ ಕಲಾವಿದರ ಅವಿರತ ಶ್ರಮ ಮತ್ತು ಅವರ ನಿತ್ಯ ನಿರಂತರ ಪ್ರಯತ್ನದಿಂದ ಮಾತ್ರ ಸಾಧ್ಯವಾಗಿದೆ.
• ಯಕ್ಷಗಾನಕ್ಕಾಗಿ ಎಷ್ಟೊಂದು ರಾಜಾಶ್ರಯಗಳಿವೆ, ದೇವಸ್ಥಾನಗಳಿವೆ, ಅಕಾಡೆಮಿಗಳಿವೆ, ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿಭಾಗಗಳಿವೆ, ದಾನಿಗಳು ಪ್ರೋತ್ಸಾಹಕರು ಇದ್ದಾರೆ. ಆದರೆ ನಾನು ಕಂಡಂತೆ ಕಳೆದ ನಾಲ್ಕು ದಶಕದಲ್ಲಿ ಒಂದು ಸುಸೂತ್ರ ರಂಗಮಂದಿರ ನಿರ್ಮಾಣ ಮಾಡಿಕೊಡಲಾಗದ ಜನನಾಯಕರು ಕೇವಲ ಹೆಸರು ಬದಲಾವಣೆಗೊಂಡ ಕಾರಣಕ್ಕೆ ಕಲಾವಿದರ ನಡುವೆ ಮೈಮನಸ್ಯ ಮೂಡಿಸುವ ಪ್ರಯತ್ನವನ್ನು ನಾವು ಎಲ್ಲಾ ಕಲಾವಿದರು ಜತೆಗೂಡಿ ಖಂಡಿಸ ತಕ್ಕದ್ದು.
• ಕರಾವಳಿ ರಂಗಾಯಣವು ಕರಾವಳಿ ಪ್ರದೇಶ ಜನಜೀವನದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಹಾಗು ಅಭಿವ್ಯಕ್ತಿ ಪಡಿಸುವ ಒಂದು ವ್ಯವಸ್ಥೆ. ಅದನ್ನು ಯಕ್ಷಗಾನಕ್ಕೆ ಸೀಮಿತಗೊಳಿಸಲಾಗದು. ರಂಗಭೂಮಿ ಎಲ್ಲಾ ಪ್ರಕಾರಗಳನ್ನು ಒಳಗೊಂಡ ಒಂದು ಕಲಾ ಅಭಿವ್ಯಕ್ತಿ. ಯಕ್ಷಗಾನವೂ ಅದರ ಒಂದು ಭಾಗವೇ ಹೊರತು ಅದುವೇ ರಂಗಭೂಮಿಯ ಪ್ರತೀಕವಲ್ಲ.
• ಯಕ್ಷಗಾನಕ್ಕೆ ಅದಕ್ಕೆ ಆದ ಆದರ್ಶನೀಯ ನಿಯಮಿತತೆಗಳಿವೆ. ಯಾಕೆಂದರೆ ಯಕ್ಷಗಾನ ಕಲೆ ಒಂದು ಕ್ಲಾಸಿಕಲ್ ಆರ್ಟ್, ಅದಕ್ಕೊಂದು ಚೌಕಟ್ಟು, ನಿಯಮ, ಆಕಾರ ಪ್ರಕಾರಗಳಿವೆ. ಅವುಗಳನ್ನು ಮೀರಿ ಯಕ್ಷಗಾನ ಪರಂಪರೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೆಳೆದಿದೆ. ಹಾಗೆ ನಡೆಸಲು ಯಕ್ಷ ರಂಗಕ್ಕೆ ವ್ಯವಸ್ಥೆಗಳಿವೆ. ಆದರೆ ಕರಾವಳಿಯ ರಂಗಭೂಮಿ ಬಡವಾಗಿದೆ. ಈಗ ಹೊಂದಿರುವ ಕಾರ್ಕಳದ ರಂಗಾಯಣವೂ ಯಕ್ಷಗಾನಕ್ಕೆ ಸೀಮಿತಗೊಂಡರೆ ರಂಗ ಕಲಾವಿದರು ಎಲ್ಲಿಗೆ ಹೋಗಬೇಕು?
• ಕರಾವಳಿ ರಂಗಾಯಣ ಉತ್ತರಕನ್ನಡ ಜಿಲ್ಲೆಯ ಗೌಳಿಗಳು, ಸಿದ್ದಿಗಳು, ನಾಯಕರು, ನವಾಯತರು, ಉಡುಪಿ ಜಿಲ್ಲೆಯ ಖಾರ್ವಿಗಳು, ಕೊರಗರು, ಕುಡುಬಿಗಳು, ಮೋಗೆರರು, ಮಲೆಕುಡಿಯರು, ಮೊಗವೀರರು, ದಕ್ಷಿಣಕನ್ನಡದ ಬೆಳ್ಚಾಡರು, ಮರಾಠಿ ಕ್ಷತ್ರಿಯರು, ಇವರೆಲ್ಲರ ಬದುಕಿನ ಆಟ, ಪಾಠ, ಆಚರಣೆ, ಸಂತಸ, ಹಾಗು ಇವರ ಬದುಕಿನ ತಲ್ಲಣಗಳನ್ನು ರಂಗಭೂಮಿಯ ಮುಖಾಂತರ ಅಭಿವ್ಯಕ್ತಿಗೊಳಿಸುವ ಮಹತ್ ಕೆಲಸ ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯಬೇಕಾಗಿದೆ. ಈ ದಿಕ್ಕಿನಲ್ಲಿ ಯೋಚಿಸದೆ ಹೆಸರು ಬದಲಾವಣೆಯ ಕುರಿತು ಜಿಜ್ಞಾಸೆಯ ಅವಶ್ಯಕತೆ ಇದೆಯೇ? ಯಕ್ಷರಂಗಾಯಣ ನಾಮಧೇಯಕ್ಕೆ ರಂಗಭೂಮಿ ಕಲಾವಿದರಿಂದ ಪ್ರತಿರೋಧ ಬಂದಿರುವುದಕ್ಕೆ ತಾನೇ ರಂಗಸಮಾಜ ಕರಾವಳಿ ರಂಗಾಯಣ ಹೆಸರನ್ನು ಶಿಫರಾಸು ಮಾಡಿ ತಿದ್ದು ಪಡಿ ತಂದಿರುವುದು.
• ಕರಾವಳಿ ರಂಗಾಯಣ ಬೇಡವಾದ್ರೆ ಉಳಿದ ಜಿಲ್ಲೆಗಳಲ್ಲಿ ಜಿಲ್ಲೆಯ ಹೆಸರಿನಲ್ಲಿ ರಂಗಾಯಣ ಇರುವುದರಿಂದ ಇಲ್ಲಿಗೂ ಉಡುಪಿ ರಂಗಾಯಣವೆಂದು ಹೆಸರಿಡಿ. ಬಳಿಕ ಉಳಿದ ಜಿಲ್ಲೆಯವರು ಅವರ ಜಿಲ್ಲೆಗೊಂದು ರಂಗಾಯಣ ಬೇಕೆಂದು ಒತ್ತಾಯಿಸಲಿ.
