ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಿ) ಕಾರ್ಕಳ ಇದರ ಬ್ಯಾಂಕಿನ 64ನೇ ವರ್ಷದ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಅಧ್ಯಕ್ಷರಾದ ಅಶೋಕ್ ಕುಮಾರ್ ಬಲ್ಲಾಳ್ ರವರ ಅಧ್ಯಕ್ಷತೆಯಲ್ಲಿ ಲ್ಯಾಂಪ್ ಸೊಸೈಟಿಯ ಸಭಾಂಗಣದಲ್ಲಿ ಸೆ.17 ರಂದು ನಡೆಯಿತು.
ಬ್ಯಾಂಕಿನಲ್ಲಿ ಒಟ್ಟು 2,619 ಸದಸ್ಯರನ್ನು ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ 216.83 ಕೋಟಿ ವ್ಯವಹಾರವನ್ನು ಮಾಡಿ 426.69 ಕೋಟಿ ಪಾಲು ಬಂಡವಾಳ, 110.21ಲಕ್ಷ ನಿಧಿಗಳು ಹಾಗೂ 6952.52 ಕೋಟಿ ಠೇವಣಿ, 287.01 ಕೋಟಿ ಕಾಯ್ದಿರಿಸಿದ ಮೊತ್ತ ಇರುತ್ತದೆ. ವರ್ಷಾಂತ್ಯಕ್ಕೆ ಕೇಂದ್ರ ಬ್ಯಾಂಕಿನಿಂದ ಪಡೆದು ಸದಸ್ಯರಿಗೆ ನೀಡಿದ ಸಾಲ ರೂ 1335.09 ಮತ್ತು ಸ್ವಂತ ಬಂಡವಾಳದ ಸಾಲ ರೂ.5764.69 ಕೋಟಿ ಇದ್ದು ಒಟ್ಟು ಸದಸ್ಯರಿಗೆ ಕೊಟ್ಟ ಸಾಲ ರೂ 7099.78 ಕೋಟಿ ಇರುತ್ತದೆ. ಈ ವರ್ಷದಲ್ಲಿ ಶೇ.70.00 ವಸೂಲಿಯಾಗಿ, ಬ್ಯಾಂಕ್ ವ್ಯವಹಾರದಲ್ಲಿ ಗಣನೀಯ ಸಾಧನೆ ಮಾಡಿರುತ್ತದೆ.
ಬ್ಯಾಂಕಿನ ಅಧ್ಯಕ್ಷರಾದ ಅಶೋಕ ಕುಮಾರ್ ಬಲ್ಲಾಳ್ ಇವರು ಮಾತನಾಡಿ ಕಳೆದ ಹಲವಾರು ವರ್ಷದಿಂದ ಬ್ಯಾಂಕು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಾ ಬಂದಿದ್ದು ಪ್ರಸಕ್ತ ವರ್ಷದಲ್ಲಿ 30.25 ಲಕ್ಷ ಲಾಭವನ್ನು ಹೊಂದಿದ್ದು 2026-27 ನೇ ಸಾಲಿನಲ್ಲಿ ಸುಮಾರು ರೂ.30.00 ಕೋಟಿ ಹೊಸ ಸಾಲ ನೀಡಲು ಯೋಜನೆ ಹಾಕಿದೆ ಎಂದರು. ಸರಕಾರದ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಎಲ್ಲಾ ಸದಸ್ಯರಿಗೆ ಮುಟ್ಟಿಸಲು ನಿರಂತರವಾಗಿ ಶ್ರಮ ಪಡುತ್ತಿದ್ದೇವೆ ಎಂದು ತಿಳಿಸಿದರು. ಬ್ಯಾಂಕಿನ ನಿರಂತರ ಅಭಿವೃದ್ಧಿಗೆ ಸೂಕ್ತ ಮಾರ್ಗದರ್ಶನ,ಹಾಗೂ ಸಹಕಾರ ನೀಡುತ್ತ ಬಂದಿರುವ ಈ ಬ್ಯಾಂಕಿನ ಮಾಜಿ ಅಧ್ಯಕ್ಷರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಮ್.ಎನ್.ರಾಜೇಂದ್ರಕುಮಾರ್ ರವರ ನಿರಂತರ ಸಹಕಾರ ಮತ್ತು ಮಾರ್ಗದರ್ಶವನ್ನು ಸ್ಮರಿಸಿ ಕೃತಜ್ಞತೆಯನ್ನು ಸಲ್ಲಿಸಲಾಯಿತು.
ಬ್ಯಾಂಕಿನ ವ್ಯವಸ್ಥಾಪಕರಾದ ಪ್ರೀತನ್ ಡಿ’ಸೋಜ ವರದಿ ವಾಚಿಸಿ, ಬ್ಯಾಂಕಿನ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿದರು. ಲೆಕ್ಕಾಧಿಕಾರಿಯಾದ ಅಖಿಲೇಶ್ ಕುಮಾರ್ ಬಜೆಟ್ ವಾಚಿಸಿದರು.
ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ರವಿರಾಜ ಉಪಾಧ್ಯಾಯ ನಿರ್ದೇಶಕರಾದ ಟಿ.ರಾಘವ ಶೆಟ್ಟಿ, ಸುದೀಪ್ ಶೆಟ್ಟಿ, ಕುಲದೀಪ್ ಸುವರ್ಣ, ಪಾಂಡುರಂಗ ಪ್ರಭು, ನಾರಾಯಣ ನಾಯ್ಕ, ಶ್ರೀಮತಿ ಜಯಲಕ್ಷ್ಮಿ ಶ್ರೀಮತಿ ಮೋಹಿನಿ ಜೆ.ಸಾಲ್ಯಾನ್, ರಘುವೀರ್.ಎಮ್.ಶಣೈ, ಚಂದ್ರಶೇಖರ ಬಾಯಾರಿ ಉಪಸ್ಥಿತರಿದ್ದರು.
ಟಿ.ರಾಘವ ಶೆಟ್ಟಿ ಸ್ವಾಗತಿಸಿ, ರಘುವೀರ್.ಎಮ್.ಶಣೈ ಧನ್ಯವಾದ ಸಲ್ಲಿಸಿದರು. ಬ್ಯಾಂಕಿನ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.
