🌹25 ಸಾವಿರಕ್ಕೂ ಮೀರಿದ ಜನರ ಸಾಕ್ಷಿಯಾದ ಕಾರ್ಕಳ ಟೈಗರ್ಸ್ ನ ಪಿಲಿ ರಂಗ್ ದೈಸಿರ🌹
🌹ಕಾರ್ಕಳ ಅನಂತಷಯನದಿಂದ ಬಂಡಿ ಮಠವರೆಗೂ ಜನ ಸಾಗರ🌹
ಕಾರ್ಕಳದಲ್ಲಿ ನಿನ್ನೆ ನಡೆದ ಅಭೂತ ಪೂರ್ವ ಪಿಲಿ ರಂಗ್ ದೈಸಿರ ಕಾರ್ಯಕ್ರಮವು ಸಾಮಾಜಿಕ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಮುಂಚೂಣಿ ಪಡೆಯುವ ಕಾರ್ಯಕ್ರಮವಾಗಿ ಮಾರ್ಪಡಾಗುವ ಮೂಲಕ ಕಾರ್ಕಳದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿತು.
ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ಕಾರ್ಕಳ ಟೈಗರ್ಸ್ ಹಮ್ಮಿಕೊಂಡ ಬೃಹತ್ ಶೋಭಾ ಯಾತ್ರೆಯನ್ನು 25 ಸಾವಿರಕ್ಕೂ ಮೀರಿದ ಜನ ವೀಕ್ಷಣೆ ಮಾಡಿ ಕಣ್ಣು, ಮನಸ್ಸನ್ನು ತುಂಬಿ ಕೊಂಡರು.
ಕಾರ್ಕಳ ಅನಂತ ಶಯನದಿಂದ ಆರಂಭಗೊಂಡ ಈ ಬೃಹತ್ ಶೋಭಾಯಾತ್ರೆಯಲ್ಲಿ ಬೃಹತ್ ಟ್ರೈಲರ್ ಗಳಲ್ಲಿ ಸುಮಾರು 100 ಹುಲಿ ಕುಣಿತದ ವೇಷದಾರಿಗಳು ಭಾಗವಹಿಸಿದ್ದುದ್ದು ಎಲ್ಲರ ಮೈ ರೋಮಾಂಚನಗೊಳಿಸಿತ್ತು.
ಸುಮಾರು 13 ಟ್ಯಾಬ್ಲೋಗಳಲ್ಲಿ ಭಾರತ ಮಾತೆಯ ವೇಷದಾರಿಯೊಂದಿಗೆ ಪ್ರಾರಂಭವಾದ ಈ ಮೆರವಣಿಗೆ ಕಾರ್ಕಳ ಪುರ ಮಾತ್ರವಲ್ಲದೆ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಜನರನ್ನು ಇತ್ತ ವೀಕ್ಷಣೆ ಮಾಡುವಂತೆ ಮಾಡಿರುವುದು ಕಾರ್ಕಳದ ಅಭೂತ ಪೂರ್ವ ಸತ್ಯವಾಗಿದೆ.
ಕಾರ್ಕಳ ಎಂಬುದು ಐತಿಹಾಸಿಕ ಹಿನ್ನೆಲೆಯುಳ್ಳ ಊರು. ಈ ಊರಿನಲ್ಲಿ ಅರಸರ ಕಾಲ ಘಟ್ಟದಿಂದಲೂ ವೈಭವ ನಡೆದಿದೆ. ಪ್ರತಿ ಕಾಲ ಘಟ್ಟದ ವೈಭವ ಸಂದರ್ಭದಲ್ಲಿ ಕೂಡ ಆಯಾಯ ತಲೆ ಮಾರಿನ ಜನರು ಆ ವೈಭವವನ್ನು ನೋಡಿ ಕಣ್ತುಂಬಿ ಕೊಂಡಿದ್ದರು.
ಅದೇ ರೀತಿಯಲ್ಲಿ ಪಿಲಿ ರಂಗ್ ದೈಸಿರ ಕಾರ್ಯಕ್ರಮವನ್ನು ಕೂಡ ಎಲ್ಲರೂ ನೋಡುವ ಮೂಲಕ ಸಂತಸ ಪಡುತ್ತಿರುವುದು ಮೆರವಣಿಗೆ ಸಂದರ್ಭದಲ್ಲಿ ಕಂಡು ಬಂತು.
ಶೋಭಾಯಾತ್ರೆ ಮೆರವಣಿಗೆಯಲ್ಲಿ ಕೂಡ ಸಾವಿರಾರು ಮಂದಿ ಭಾಗವಹಿಸಿ ಮೆರವಣಿಗೆಯನ್ನು ಸುಂದರವಾಗಿ ಮಾಡುವಲ್ಲಿ ಶ್ರಮಿಸಿದ್ದರು.
ಮೆರವಣಿಗೆ ಬಂಡಿ ಮಠದಲ್ಲಿ ಸಮಾಪನ ಗೊಂಡ ಬಳಿಕ ಬಂಡಿ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ನಡೆಯಿತು.
ಈ ಸಭಾ ವೇದಿಕೆಯಲ್ಲಿ ನೂರಾರು ಹುಲಿಗಳು ಚಂಡೆ, ತಾಸೆಯ ಸದ್ದಿಗೆ ಕುಣಿತ ಹಾಕಿದ್ದು ಕೂಡ ಎಲ್ಲರಲ್ಲೂ ನಮ್ಮ ತುಳುನಾಡ ಸಂಸ್ಕೃತಿ ಬಗ್ಗೆ ಗೌರವ ಮೂಡಿಸುವಂತೆ ಮಾಡಿದೆ.
ಅಂತೂ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗವು ಕಾರ್ಕಳ ಟೈಗರ್ಸ್ ಮೂಲಕ ತುಳುನಾಡ ಸಂಸ್ಕೃತಿಯನ್ನು ಕಾರ್ಕಳದಲ್ಲಿ ಬಿಂಬಿಸುವ ಮೂಲಕ ಸುಮಾರು 25 ಸಾವಿರಕ್ಕೂ ಮೀರಿದ ಜನರನ್ನು ಸ್ವಯಂ ಪ್ರೇರಿತರಾಗಿ ಕಾರ್ಕಳದತ್ತ ಸೆಳೆದಿರುವುದು ಐತಿಹಾಸಿಕ ವಿಚಾರ.