ಮೂಡುಬಿದಿರೆ: ಡಿಜಿಟಲ್ ತಂತ್ರಜ್ಞಾನವು ಮಾನವ ಬದುಕನ್ನು ಸುಗಮಗೊಳಿಸಿರುವಂತೆಯೇ, ಅದರ ದುರ್ಬಳಕೆಯಿಂದ ಸೈಬರ್ ಅಪರಾಧಗಳ ಜಾಲವೂ ವ್ಯಾಪಕವಾಗುತ್ತಿದೆ. ಆನ್ಲೈನ್ ವಂಚನೆ, ನಕಲಿ ಕರೆಗಳು, ಅಪರಿಚಿತ ಲಿಂಕ್ಗಳು ಹಾಗೂ ಸಾಮಾಜಿಕ ಜಾಲತಾಣಗಳ ದುರ್ಬಳಕೆಯ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ ಎಂದು ಮೂಡುಬಿದಿರೆ ಆರಕ್ಷಕ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರಾಜೇಂದ್ರ ಕುಮಾರ್ ಹೇಳಿದರು.
ಅವರು ಎಕ್ಸಲೆಂಟ್ ಪದವಿಪೂರ್ವ ಕಾಲೇಜು, ಕಲ್ಲಬೆಟ್ಟು, ಮೂಡುಬಿದಿರೆ ಇಲ್ಲಿ ಆಯೋಜಿಸಲಾದ ಸೈಬರ್ ಕ್ರೈಂ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ತಂತ್ರಜ್ಞಾನವನ್ನು ಬಳಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು, ವೈಯಕ್ತಿಕ ಮಾಹಿತಿಯ ಸುರಕ್ಷತೆ ಹಾಗೂ ಆನ್ಲೈನ್ ವಂಚನೆಗಳಿಂದ ದೂರವಿರಲು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ಅಪರಿಚಿತ ವ್ಯಕ್ತಿಗಳಿಂದ ಬರುವ ಕರೆಗಳು ಮತ್ತು ಸಂದೇಶಗಳನ್ನು ನಂಬಿ ಬ್ಯಾಂಕ್ ಖಾತೆಯ ವಿವರ, ಒಟಿಪಿ, ಪಾಸ್ವರ್ಡ್ ಮೊದಲಾದ ಗೌಪ್ಯ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ಆಮಿಷಗಳಿಗೆ ಒಳಗಾಗಿ ಅಪರಿಚಿತ ಲಿಂಕ್ಗಳನ್ನು ತೆರೆಯುವುದು ಹಾಗೂ ಪರಿಶೀಲಿಸದ ಆನ್ಲೈನ್ ವ್ಯವಹಾರಗಳಲ್ಲಿ ತೊಡಗುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಾಗಲೂ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಸೈಬರ್ ಅಪರಾಧಗಳಿಗೆ ಬಲಿಯಾದ ಸಂದರ್ಭದಲ್ಲಿ ಭಯದಿಂದ ಅಥವಾ ಮುಜುಗರದಿಂದ ಸುಮ್ಮನಿರದೆ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಬೇಕು. ಸಕಾಲದಲ್ಲಿ ದೂರು ಸಲ್ಲಿಸುವುದರಿಂದ ವಂಚನೆಯಿಂದ ಉಂಟಾಗುವ ನಷ್ಟವನ್ನು ತಡೆಯಲು ಹಾಗೂ ಅಪರಾಧಿಗಳ ಪತ್ತೆಗೆ ನೆರವಾಗಲು ಸಾಧ್ಯವಿದೆ ಎಂದು ಅವರು ತಿಳಿಸಿದರು. ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿ ವ್ಯವಹರಿಸಲು ತಾಂತ್ರಿಕ ಜ್ಞಾನದ ಜೊತೆಗೆ ವಿವೇಚನೆ ಮತ್ತು ಜಾಗೃತಿಯೂ ಅಗತ್ಯವೆಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಮೂಡುಬಿದಿರೆ ಆರಕ್ಷಕ ಠಾಣೆಯ ಸಬ್ಇನ್ಸ್ಪೆಕ್ಟರ್ ಪ್ರತಿಭಾ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪುಷ್ಪರಾಜ್ ಬಿ. ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ಕಾಂತಾವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕ ಜಯಶೀಲ ಸ್ವಾಗತಿಸಿ, ವಂದಿಸಿದರು. ಕಾಲೇಜಿನ ಭಾಷಾ ವಿಭಾಗದ ಮುಖ್ಯಸ್ಥ ಡಾ. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.
