ಮಂಗಳೂರು: ಸಂಘದಲ್ಲಿ ಸಾಲಗಾರರ ನಿಧನಾ ನಂತರ ಅವರ ಕುಟುಂಬ ಸದಸ್ಯರ ಸುರಕ್ಷತೆಗಾಗಿ ಅನುಷ್ಠಾನಿಸಲಾದ ಸಾಲಗಾರರ ಮರಣೋತ್ತರ ಸಾಲ ಸಂರಕ್ಷಣಾ ಯೋಜನೆಯಡಿ ಫಲಾನುಭವಿಗಳಿಗೆ ‘ಋಣ ಮುಕ್ತ ಸಾಲಪರಿಹಾರ ಪತ್ರ’ ವಿತರಣಾ ಕಾರ್ಯಕ್ರಮವು ಅ. 12ರಂದು ಮಂಗಳೂರಿನ ಬಂಟ್ಸ್ ಹಾಸ್ಟೆಲ್ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿತು.
ಸಮಾರಂಭವನ್ನು ಕರ್ನಾಟಕ ಬ್ಯಾಂಕ್ನ ಜನರಲ್ ಮ್ಯಾನೇಜರ್ ಗೋಪಾಲಕೃಷ್ಣ ಸಾಮಗ ಬಿ.ಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಇದೊಂದು ವಿಶಿಷ್ಟ, ವಿನೂತನ, ಮಾನವೀಯ ಕಳಕಳಿಯ ಯೋಜನೆಯಾಗಿದ್ದು, ಸಾಮಾನ್ಯವಾಗಿ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಸಾಲ ಮಂಜೂರಾತಿ ಪತ್ರ, ಸಾಲ ವಸೂಲಾತಿ ಪತ್ರಗಳನ್ನು ನೀಡುತ್ತಿದೆ. ಆದರೆ ಈ ಯೋಜನೆಯಲ್ಲಿ ಮೃತ ಸಾಲಗಾರರ ಹೊರಬಾಕಿ ಸಾಲವನ್ನು ಸಂಘದೊಂದಿಗೆ, ಸಾಲಗಾರ ಸದಸ್ಯರು ಸೇರಿಕೊಂಡು ಸಾಲವನ್ನು ಭರಿಸಿ, ಮುಕ್ತಾಯಗೊಳಿಸಿ, ಸಾಲಗಾರರ ಕುಟುಂಬಕ್ಕೆ ಸಾಂತ್ವನ ನೀಡುವ ಈ ಯೋಜನೆಯ ಕಲ್ಪನೆ ಮತ್ತು ಅನುಷ್ಠಾನ ಅತ್ಯಂತ ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರು ಮಾತನಾಡಿ ಸಹಕಾರ ಕ್ಷೇತ್ರದ ಮೂಲ ಮಂತ್ರವಾದ “ಎಲ್ಲರೂ ಒಬ್ಬನಿಗಾಗಿ, ಒಬ್ಬನು ಎಲ್ಲರಿಗಾಗಿ” ಎಂಬ ಧ್ಯೇಯವಾಕ್ಯವನ್ನು ಅಕ್ಷರಶಃ ಪಾಲಿಸಿಕೊಂಡು, ಸಂಘವು ಮೃತ ಸಾಲಗಾರರ ಕುಟುಂಬಕ್ಕೆ ಅನುಕೂಲವಾಗುವಂತೆ ಈ ಸಾಮಾಜಿಕ ಸುರಕ್ಷಾ ಯೋಜನೆ ಮುಖೇನ ಸಂಘ ಹಾಗೂ ಸಾಲಗಾರ ಸದಸ್ಯರು ಸೇರಿಕೊಂಡು ಮೃತ ಸಾಲಗಾರರ ಸಾಲವನ್ನು ಮುಕ್ತಾಯಗೊಳಿಸುವ ಅನುಕಂಪ ಆಧಾರಿತ ಸೌಲಭ್ಯವನ್ನು ಸಹಕಾರ ಹಣಕಾಸು ಕ್ಷೇತ್ರದಲ್ಲಿ ನಮ್ಮ ಸಂಘವು ಅನುಷ್ಠಾನಿಸಿರುವುದು ನಮ್ಮಲ್ಲಿ ಧನ್ಯತಾಭಾವ ಮೂಡಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 5 ಫಲಾನುಭವಿಗಳಾದ ಶ್ರೀಮತಿ ಹರಿಣಾಕ್ಷಿ, ಮಜಿದ್ ಯನ್, ಶ್ರೀಮತಿ ನಳಿನಾಕ್ಷಿ, ಶ್ರೀಮತಿ ಮೈಮುನಾ, ಶ್ರೀಮತಿ ಮೈಮುನಾರವರಿಗೆ ಒಟ್ಟು ರೂ. 428283/-ರಷ್ಟು ಮೊತ್ತದ ಸಾಲ ಮುಕ್ತಾಯದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಸಂಘದ ನಿರ್ದೇಶಕರುಗಳಾದ ಪಿ.ಬಿ. ದಿವಾಕರ ರೈ, ರವೀಂದ್ರನಾಥ ಜಿ. ಹೆಗ್ಡೆ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಾ. ಬಿ. ಸಂಜೀವ ರೈ, ಶಾಖಾ ಸಲಹಾ ಸಮಿತಿಯ ಸದಸ್ಯರುಗಳು, ಫಲಾನುಭವಿಗಳು, ಗ್ರಾಹಕರು, ಶಾಖಾಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಹಾಪ್ರಬಂಧಕರಾದ ಗಣೇಶ್ ಜಿ.ಕೆ. ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಪಡೀಲು ಶಾಖೆಯ ಶಾಖಾಧಿಕಾರಿ ಶ್ರೀಮತಿ ಅಶ್ವಿನಿ ಶೆಟ್ಟಿಯವರು ಪ್ರಾರ್ಥಿಸಿದರು. ಕೇಂದ್ರ ಕಛೇರಿಯ ಹಿರಿಯ ವ್ಯವಸ್ಥಾಪಕರಾದ ಶ್ರೀಮತಿ ಜ್ಯೋತಿ ಪುರಾಣಿಕ್ ವಂದಿಸಿದರು.
