🔴ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ಅನಾವರಣ.
🔴ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಲೋಕಾರ್ಪಣೆ.
🔴ನವೆಂಬರ್ 2ರಂದು ಮುಂಬೈನಲ್ಲಿ ‘Village Boy to Global Rice Techie’ ಕೃತಿ ಬಿಡುಗಡೆ.
🔴ಗ್ರಾಮೀಣ ಪ್ರತಿಭೆಯ ಜಾಗತಿಕ ಸಾಧನೆಯ ಪಯಣಕ್ಕೆ ಸಾಕ್ಷಿಯಾಗಲಿದೆ ಕೃತಿ.
– ಸುಕುಮಾರ್ ಮುನಿಯಾಲ್
ಹೆಬ್ರಿ : ಗ್ರಾಮೀಣ ಪರಿಸರದಲ್ಲಿ ಬೆಳೆದು, ಸ್ವಂತ ಪರಿಶ್ರಮ, ಬದ್ಧತೆ, ನಿರಂತರ ಪ್ರಯತ್ನ ಮತ್ತು ಎಂದಿಗೂ ಸೋಲೊಪ್ಪದ ಛಲದಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಉದ್ಯಮಿ ಹಾಗೂ ತಂತ್ರಜ್ಞಾನ ಸಾಧಕ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ಇದೀಗ ಪುಸ್ತಕ ರೂಪದಲ್ಲಿ ಅನಾವರಣಗೊಳ್ಳಲಿದೆ.
ಅವರ ಜೀವನ, ಸಾಧನೆಗಳು, ಉದ್ಯಮಶೀಲತೆಯ ಪಯಣ ಹಾಗೂ ತಾಂತ್ರಿಕ ಆವಿಷ್ಕಾರಗಳನ್ನು ಒಳಗೊಂಡ ‘Village Boy to Global Rice Techie’ ಎಂಬ ಜೀವನಚರಿತ್ರೆಯನ್ನು ಇಂದು ನವೆಂಬರ್ 2ರಂದು ಮುಂಬೈನಲ್ಲಿ ಪ್ರಮುಖ ಹಣಕಾಸು ದೈನಿಕ ಪತ್ರಿಕೆ Financial Express ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನಾವರಣಗೊಳಿಸಲಿದ್ದಾರೆ. ಎಂ. ರಾಘುರಾಮ್ ಅವರು ಕೃತಿಯನ್ನು ರಚಿಸಿದ್ದಾರೆ.
ಸಾಮಾನ್ಯ ಗ್ರಾಮೀಣ ಹಿನ್ನೆಲೆಯಿಂದ ಆರಂಭವಾದ ಅವರ ಪಯಣ ಇಂದು ಕೃಷಿ ಮತ್ತು ಆಹಾರ ಸಂಸ್ಕರಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಗುರುತಿನವರೆಗೆ ತಲುಪಿದೆ. ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು, ಸ್ವಂತ ಸಾಮರ್ಥ್ಯ ಮತ್ತು ನಿರಂತರ ಪರಿಶ್ರಮದಿಂದ ಉದ್ಯಮವನ್ನು ಬೆಳೆಸಿದ ಅವರ ಬದುಕು ಅನೇಕರಿಗೆ ಮಾದರಿಯಾಗಿದೆ.
ಡಾ. ರಾಮಕೃಷ್ಣ ಆಚಾರ್ ಅವರ ನೇತೃತ್ವದ SKF Elixer India Pvt. Ltd. ಸಂಸ್ಥೆಯು ಭತ್ತ ಸಂಸ್ಕರಣಾ ಘಟಕಗಳು, ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳಾದ STP ಮತ್ತು ETP ಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.
ವಿಶೇಷವಾಗಿ, ಭತ್ತ ಸಂಸ್ಕರಣಾ ಕ್ಷೇತ್ರದಲ್ಲಿ ಭಾರತೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಅವರ ಸಂಸ್ಥೆಯ ತಂತ್ರಜ್ಞಾನಗಳು ಇಂದು 27 ದೇಶಗಳಲ್ಲಿ ಬಳಕೆಯಲ್ಲಿರುವುದು ಅವರ ಉದ್ಯಮಶೀಲತೆಯ ಜಾಗತಿಕ ವ್ಯಾಪ್ತಿಗೆ ಸಾಕ್ಷಿಯಾಗಿದೆ. ಸ್ಥಳೀಯ ಅಗತ್ಯಗಳನ್ನು ಅರಿತು ರೂಪಿಸಿದ ಪರಿಹಾರಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ‘ಮೇಕ್ ಇನ್ ಇಂಡಿಯಾ – ಫಾರ್ ದಿ ವರ್ಲ್ಡ್’ ಆಶಯಕ್ಕೂ ಬಲ ತುಂಬಿದ್ದಾರೆ.
ಈ ಜೀವನಚರಿತ್ರೆ ಕೇವಲ ಒಬ್ಬ ಉದ್ಯಮಿಯ ಯಶಸ್ಸಿನ ದಾಖಲೆಯಲ್ಲ. ಕನಸು ಕಾಣುವ ಧೈರ್ಯ, ಅದನ್ನು ನನಸಾಗಿಸಲು ಬೇಕಾದ ಪರಿಶ್ರಮ, ಶಿಸ್ತು, ಬದ್ಧತೆ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲೂ ಮುನ್ನಡೆಯುವ ಮನೋಭಾವದ ಕಥನವಾಗಿದೆ. ಯಾವುದೇ ದೊಡ್ಡ ಹಿನ್ನೆಲೆ ಅಥವಾ ಸಿದ್ಧ ಅವಕಾಶಗಳಿಲ್ಲದಿದ್ದರೂ ಸ್ವಂತ ಪ್ರಯತ್ನದಿಂದ ಎತ್ತರಕ್ಕೇರಬಹುದು ಎಂಬುದಕ್ಕೆ ಡಾ. ರಾಮಕೃಷ್ಣ ಆಚಾರ್ ಅವರ ಬದುಕು ನಿದರ್ಶನವಾಗಿದೆ. 3 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ಅನ್ನದಾತರಾಗಿದ್ದಾರೆ.
ಸಪ್ನಾ ಬುಕ್ ಹೌಸ್ನಿಂದ ಪ್ರಕಟವಾಗಲಿರುವ ಈ ಕೃತಿ ಪ್ರಮುಖ ಪುಸ್ತಕ ಮಳಿಗೆಗಳು ಹಾಗೂ ಗ್ರಂಥಾಲಯಗಳಲ್ಲಿ ಲಭ್ಯವಾಗಲಿದೆ. ವಿಶೇಷವಾಗಿ, ಯುವ ಉದ್ಯಮಿಗಳು ಹಾಗೂ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬಲ್ಲ ಈ ಕೃತಿಗೆ ದೇಶದ ವಿವಿಧ ಬಿ-ಸ್ಕೂಲ್ಗಳಿಂದ ಬೇಡಿಕೆ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಮನೋಭಾವ ಬೆಳೆಸುವ ಉದ್ದೇಶದಿಂದ ತಮ್ಮ ಸಂಸ್ಥೆಗಳ ಗ್ರಂಥಾಲಯಗಳಿಗಾಗಿ ಈ ಪುಸ್ತಕದ ಪ್ರತಿಗಳನ್ನು ಪಡೆಯಲು ಬಿ-ಸ್ಕೂಲ್ಗಳು ಆಸಕ್ತಿ ತೋರಿಸುತ್ತಿವೆ.
ಒಂದು ಹಳ್ಳಿಯಿಂದ ಆರಂಭವಾದ ಕನಸು ಜಗತ್ತಿನಾದ್ಯಂತ ಗುರುತಿಸಿಕೊಳ್ಳುವ ಸಾಧನೆಯಾಗಿ ರೂಪುಗೊಂಡ ಕಥೆ, ಮುಂದಿನ ಪೀಳಿಗೆಯ ಉದ್ಯಮಿಗಳಿಗೆ ಕನಸು ಕಾಣುವುದಷ್ಟೇ ಅಲ್ಲ, ಅದನ್ನು ನನಸಾಗಿಸುವ ಛಲವನ್ನೂ ಕಲಿಸಲಿದೆ. ಸಾಧನೆಗೆ ಹಿನ್ನೆಲೆಗಿಂತ ಪರಿಶ್ರಮ, ಬದ್ಧತೆ ಮತ್ತು ದೂರದೃಷ್ಟಿಯೇ ಮುಖ್ಯ ಎಂಬ ಸಂದೇಶವನ್ನು ಸಾರುವ ‘Village Boy to Global Rice Techie’ ಸ್ಫೂರ್ತಿಯ ಕೃತಿಯಾಗಲಿದೆ.
………
3 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೊಟ್ಟ ಅನ್ನದಾತ
ಸುಮಾರು 45 ವರ್ಷಗಳ ಹಿಂದೆ ಅತ್ಯಂತ ಗ್ರಾಮೀಣ ಪ್ರದೇಶದ ಕುಂದಾಪುರ ತಾಲ್ಲೂಕಿನ ಗುಡ್ಡೆಯಂಗಡಿ ಗ್ರಾಮದಿಂದ ಉದ್ಯೋಗ ಅರಸಿ ಮೂಡಬಿದರೆಗೆ ಬಂದು ನೆಲೆನಿಂತು ಉದ್ಯೋಗ ಮಾಡಿ ಕಠಿಣ ಪರಿಶ್ರಮದಿಂದ
ಕೈಗಾರಿಕೆ ಸ್ಥಾಪಿಸಿ ಹಂತಹಂತವಾಗಿ ಬೆಳೆದು ಇದೀಗ ಗ್ರಾಮೀಣ ಪ್ರದೇಶದ ಮೂಡಬಿದರೆಯನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ಜಾಗತೀಕ ಮಟ್ಟದ ಕೈಗಾರಿಕೊದ್ಯಮಿಯಾಗಿ ಡಾ. ಜಿ. ರಾಮಕೃಷ್ಣ ಆಚಾರ್ ಹೊರ ಹೊಮ್ಮಿದ್ದಾರೆ.
ಅತ್ಯಂತ ಸರಳ ವ್ಯಕ್ತಿತ್ವದ ಶ್ರಮಜೀವಿ ರಾಮಕೃಷ್ಣ ಆಚಾರ್ಈಗ 3000 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೊಟ್ಟ ಅನ್ನದಾತರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಿಂದ ಸ್ಥಾಪನೆಯಾಗಿರುವ ಕಂಪೆನಿಯ ಉತ್ಪನ್ನಗಳು ವಿಶ್ವದಾದ್ಯಂತ “ಎಸ್ಕೆಎಫ್” ಬ್ರ್ಯಾಂಡ್ಮೂಲಕ ಖ್ಯಾತಿಗಳಿಸಿದೆ. ಎಸ್ಕೆಎಫ್ ಬಾಯ್ಲರ್ ಎಂಡ್ ಡ್ರೈಯರ್ಸ್, ಎಸ್ಕೆಎಫ್ ಎಲಿಕ್ಸರ್ ಇಂಡಿಯಾ ಶುಧ್ಧ ಕುಡಿಯುವ ನೀರು ಒದಗಿಸುವ ಯಂತ್ರಗಳ ತಯಾರಿಕ ಕಂಪೆನಿ ತನ್ನ ಉತ್ಪನ್ನಗಳನ್ನು ವಿಶ್ವದೆಲ್ಲೆಡೆ ನೀಡುತ್ತಿದೆ. ಅತ್ಯಂತ ಕಡು ಬಡತನದಲ್ಲಿ ಬೆಳೆದು ಬಂದು ಈಗ ವಿಶ್ವಮಟ್ಟದ ಉದ್ಯಮಿಯಾಗಿ ಹೊರಹೊಮ್ಮಿರುವುದು ಮೂಡಬಿದರೆಯ ಜೊತೆಗೆ ನಮ್ಮ ರಾಜ್ಯಕ್ಕೂ ಹೆಮ್ಮೆ. ಪ್ರಧಾನಿಗಳ ಮೇಕ್ಇನ್ಇಂಡಿಯಾ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಮೂಲಕ ಭಾರತದ ಹೆಸರನ್ನು ವಿಶ್ವದ ಮಟ್ಟದಲ್ಲಿ ಎತ್ತರಿಸುವವರಲ್ಲಿ ನಮ್ಮ ಡಾ. ರಾಮಕೃಷ್ಣ ಆಚಾರ್ಯ ಕೂಡ ಒಬ್ಬರು.
ತನ್ನ ಉದ್ಯಮದ ಲಾಭದ ಬಹುಪಾಲನ್ನು ಸಮಾಜಕ್ಕೆ ತೆರೆಮರೆಯಲ್ಲೇ ನೀಡುತ್ತಿದ್ದಾರೆ. ದೀನ ದಲಿತರ ಸೇವೆ, ಬಡವರಿಗೆ ನಿರಂತರ ಸಹಾಯ, ಬಡ ಹೆಣ್ಣು ಮಕ್ಕಳ ಮದುವೆಗೆ ನೆರವು, ಮನೆ ನಿರ್ಮಾಣಕ್ಕೆ ಸಹಾಯ, ಆರೋಗ್ಯ, ಶಿಕ್ಷಣಕ್ಕೆ ನೆರವು, ಶಿಕ್ಷಣಕ್ಕೆ ಉತ್ತೇಜನ ನೀಡಲು ಶೈಕ್ಷಣಿಕ ಶಿಬಿರ, ಅನ್ನ – ಅಕ್ಷರ – ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡುವ ಡಾ. ಜಿ.ರಾಮಕೃಷ್ಣ ಆಚಾರ್ ಸಾವಿರಾರು ಮಂದಿಯ ಕಷ್ಟಕ್ಕೆ ನೆರವಾಗಿದ್ದಾರೆ. ಹಲವಾರು ದೇವಸ್ಥಾನಗಳನ್ನು ಮುಂಚೂಣಿಯಲ್ಲಿ ನಿಂತು ಪುನ:ನಿರ್ಮಾಣದ ಕೈಕಂರ್ಯದಲ್ಲಿ ಭಾಗಿಯಾಗಿದ್ದಾರೆ. ಇವರ ಸಾಧನೆಗೆ ಟಿವಿ-೯ ವಾರ್ತಾವಾಹಿನಿ ” ಝೀರೋ ದಿಂದ ಹೀರೋ ” ಸಂದರ್ಶನದ ಗೌರವ ನೀಡಿದೆ. ಟೈಮ್ಸ್ಗ್ರೂಫ್ವಿಶೇಷ ಗೌರವ ಪುರಸ್ಕಾರ ನೀಡಿದೆ. ಉದ್ಯಮ ಕ್ಷೇತ್ರದ ಹಲವು ಜಾಗತೀಕ ಪ್ರಶಸ್ತಿಗಳು ರಾಮಕೃಷ್ಣ ಆಚಾರ್ಅವರಿಗೆ ಸಂದಿದೆ. ಯಕ್ಷಗಾನ, ನಾಟಕ, ಸಾಮಾಜಿಕ, ಧಾರ್ಮಿಕ, ಆರೋಗ್ಯ ಸಹಿತ ಹಲವು ಕ್ಷೇತ್ರಕ್ಕೆ ತನ್ನಿಂದಾದ ನೆರವನ್ನು ರಾಮಕೃಷ್ಣ ಆಚಾರ್ ನೀಡುತ್ತ ಬಂದಿದ್ದಾರೆ.
ಹೈನುಗಾರಿಕೆಯಲ್ಲಿ ವಿಶೇಷ ಸಾಧನೆ : ಕೈಗಾರಿಕೋಧ್ಯಮಿಯಾಗಿ ತನ್ನ ಅವಿರತ ಕೆಲಸದ ಒತ್ತಡದ ನಡುವೆಯೂ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುನಿಯಾಲಿನಲ್ಲಿ ಸುಮಾರು ೨೦ ಎಕರೆ ಜಾಗದಲ್ಲಿ ವಿಶೇಷವಾದ ಪುರಾತನ ಪರಿಕಲ್ಪನೆಯ ಅತ್ಯಾಧುನಿಕ ಶೈಲಿಯಲ್ಲಿ ಗೋಶಾಲೆ ” ಗೋಧಾಮ = ಸಂಜೀವಿನಿ ಫಾರ್ಮ್ ನಿರ್ಮಿಸಿ ಗೀರ್ಸಹಿತ ಭಾರತೀಯ ಗೋತಳಿಗಳ ಸಂರಕ್ಷಣೆಯ ಪುಣ್ಯದ ಕಾರ್ಯದಲ್ಲಿ ತೊಡಗಿದ್ದಾರೆ. ಮುನಿಯಾಲು ಗೋಧಾಮ ಈಗ ” ಕೃಷಿ ವಿಶ್ವವಿದ್ಯಾಲಯದಂತೆ ರೂಪುಗೊಂಡಿದೆ. ದೇಶದ ಬೆನ್ನೆಲುಬು ರೈತರನ್ನು ಮುಖ್ಯವಾಹಿನಿಗೆ ತಂದು ರೈತರಿಗೆ ವಿಶೇಷವಾದ ಗೌರವ ನೀಡುವ ಮಹತ್ವದ ಉದ್ದೇಶದಿಂದ ” ರೈತಪೀಠ” ಎಂಬ ವಿಶೇಷ ರಾಷ್ಟ್ರೀಯ ಪ್ರಶಸ್ತಿಯನ್ನು 2025ರಲ್ಲಿ ಸ್ಥಾಪಿಸಿ ರಾಷ್ಟ್ರೀಯ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಮುನಿಯಾಲಿನ ಗೋಧಾಮದಲ್ಲೇ ಪ್ರದಾನ ಮಾಡುತ್ತಿದ್ದಾರೆ.
ಉದ್ಯೋಗದಾತ ಪ್ರಗತಿಪರ ಕೃಷಿಕ ಬಡವರ ಬಂಧು ಅತ್ಯಂತ ಕ್ರೀಯಾಶೀಲರಾಗಿರುವ ಡಾ. ಜಿ.ರಾಮಕೃಷ್ಣ ಆಚಾರ್ ಸದಾ ಹೊಸ ಯೋಜನೆ ಯೋಚನೆಯಲ್ಲೇ ಸಮಾಜಮುಖಿ ಕಾರ್ಯದಲ್ಲಿ ಸಕ್ರೀಯರಾಗುವವರು.
– ವಿಶೇಷ ಲೇಖನ ಸುಕುಮಾರ್ ಮುನಿಯಾಲ್
–
