ಕಾರ್ಕಳ: ಕಾಂಗ್ರೆಸ್‌ನ ರಾಜಕೀಯ ಸೇಡಿಗೆ ಬೈಲೂರು ಪರಶುರಾಮ ಥೀಂ ಪಾರ್ಕ್ ಬಲಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಜ.12 ರಂದು ಕಾರ್ಕಳದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಬಿಜೆಪಿ ವಕ್ತಾರದ ರವೀಂದ್ರ ಮೊಯ್ಲಿ ಕಾಂಗ್ರೆಸ್ ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು..
ತನಿಖೆಯ ನೆಪದಲ್ಲಿ ಹಾಗೂ ಮುಂದಿನ ಚುನಾವಣೆಯವರೆಗೆ ಈ ವಿಷಯವನ್ನು ಜೀವಂತ ಇಟ್ಟುಕೊಳ್ಳುವ ಉದ್ದೇಶದಿಂದ ಪರಶುರಾಮ ಥೀಂ ಪಾರ್ಕ್ ಕಾಮಗಾರಿಗೆ ಬಿಡುಗಡೆಯಾಗಬೇಕಿದ್ದ ಅನುದಾನವನ್ನು ತಡೆಹಿಡಿಯಲಾಗಿದೆ. ಇದರಿಂದ ಯಾವುದೇ ಕಾಮಗಾರಿಗಳು ಮುಂದುವರಿಯದೆ ಸ್ಥಗಿತಗೊಂಡಿವೆ ಎಂದು ಅವರು ಹೇಳಿದರು.
ಭಾರತೀಯ ಜನತಾ ಪಾರ್ಟಿ ಆರಂಭದಿಂದಲೂ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳುತ್ತಲೇ ಬಂದಿದೆ. ತನಿಖೆಯ ನೆಪದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಬಾರದೆಂದು ಮನವಿ ಮಾಡಿದ್ದರೂ, ಕಾಂಗ್ರೆಸ್ ನಾಯಕರು ಮೊದಲು ಮೂರ್ತಿ ಫೈಬರ್‌ನದ್ದು ಎಂದು ಹುಯಿಲೆಬ್ಬಿಸಿ, ಬಳಿಕ ಅದು ಫೈಬರ್ ದಲ್ಲ ಎಂದು ಗೊತ್ತಾದ ನಂತರ ಬೇರೆ ಬೇರೆ ಹೇಳಿಕೆಗಳನ್ನು ನೀಡುತ್ತ ಥೀಮ್ ಪಾರ್ಕ್ ಕಾಮಗಾರಿಯನ್ನೇ ತಡೆ ಹಿಡಿದ್ದಾರೆ ಎಂದರು.
ಕಳ್ಳತನ ಪ್ರಕರಣವಾದಗ ಭಾಷೆಯ ಹಿಡಿತವಿಲ್ಲದೆ ಶಾಸಕರ ಬಗ್ಗೆಯೇ ಅವಹೇಳನಕಾರಿ ಹೇಳಿಕೆ ನೀ ಡಿರುವುದು ಖಂಡನೀಯ ಎಂದರು. ಕಳ್ಳತನ ಪ್ರಕರಣದಲ್ಲಿ ಕಳವಾರು ಚರ್ಚ್ ಗುಡ್ಡೆಯ ಆರೀಪ್ ಅಲಿಯಾಸ್ ಮುನ್ನಾ ಹಾಗೂ ಮಂಗಳೂರು ಕಾವೂರಿನ ಅಬ್ದುಲ್ ಹಮೀದ್ ಎಂಬವರನ್ನು ದಸ್ತಗಿರಿ ಮಾಡಲಾಗಿದ್ದು, ಕಳವುಗೈದ ವಸ್ತುಗಳ ಜಪ್ತಿಯೂ ನಡೆದಿದೆ. ನೈಜ ಆರೋಪಿಗಳು ಬಂಧನವಾದ ಬಳಿಕ ಕಾಂಗ್ರೆಸ್ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಕಾಣುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ರಾಜಕೀಯ ಕಾರಣದಿಂದ ನಡೆದ ವ್ಯವಸ್ಥಿತ ಅಪಪ್ರಚಾರ ಹಾಗೂ ಷಡ್ಯಂತ್ರಗಳಿಂದಾಗಿ ಒಂದು ಉತ್ತಮ ಪ್ರವಾಸಿ ತಾಣವಾಗಿ ಬೆಳೆಯುತ್ತಿದ್ದ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಬ್ಧಗೊಂಡಿವೆ. ಸೂಕ್ತ ನಿರ್ವಹಣೆ ಇಲ್ಲದೆ ಅಲ್ಲಿನ ಕಟ್ಟಡಗಳು ಹಾಗೂ ವಸ್ತುಗಳು ಹಾಳಾಗುತ್ತಿವೆ. ಕಾಮಗಾರಿಗೆ ಬಿಡುಗಡೆಯಾಗಬೇಕಿದ್ದ 4.33 ಕೋಟಿ ರೂ. ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ವಿನಾಕಾರಣ ಶಾಸಕ ವಿ. ಸುನಿಲ್ ಕುಮಾರ್ ಅವರ ಹೆಸರನ್ನು ಎಳೆದು ತರುವ ಕಾರ್ಯ ಕಾಂಗ್ರೆಸ್ ಮಾಡುತ್ತಿದೆ. ಸರಕಾರದ ಹಣವನ್ನು ಸಂಬಂಧಪಟ್ಟ ಇಲಾಖೆಗಳು ಬಿಡುಗಡೆ ಮಾಡಬೇಕು, ಶಾಸಕರ ಮೇಲೆ ಅಸಂಬದ್ಧ ಆರೋಪ ಮಾಡುವುದು ಸಭ್ಯತೆಯನ್ನು ಮೀರುತ್ತದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ಮುಖಂಡ ಸುಮಿತ್ ಶೆಟ್ಟಿ, ಮಾತನಾಡಿ ‘ಫೈಬರ್ ಗ್ಯಾಂಗ್’ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಬಂಧನವಾದ ಕಳ್ಳರು ಕಾಂಗ್ರೆಸ್‌ನ ಬ್ರದರ್ಸ್ ಎಂದು ಆರೋಪಿಸಿ, ಫೈಬರ್ ಗ್ಯಾಂಗ್ ವಿರುದ್ಧ (ಸುಮೊಟೋ) ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಚುನಾವಣೆಗೆ ನಿಲ್ಲುತ್ತಿರುವುದೇ ಒಂದು ದುರಂತ ಕಥೆ ಎಂದು ವ್ಯಂಗ್ಯವಾಡಿದರು. ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಕಳದ ಅಭಿವೃದ್ಧಿಯನ್ನು ಸಹಿಸದೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಉದಯಕುಮಾರ್ ಶೆಟ್ಟಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ನಿರಂಜನ್ ಜೈನ್, ಸುರೇಶ್ ಸಾಯಿರಾಂ ಬೈಲೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
