ಮೂಡುಬಿದಿರೆ:ಕೌಶಲ ಜ್ಞಾನ ಹಾಗೂ ಪ್ರತಿಭೆಯನ್ನು ತೋರ್ಪಡಿಸುವ ಸಾಮಥ್ರ್ಯ ಇರುವ ವಿದ್ಯಾರ್ಥಿಗಳಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ ಎಂದು ಮಂಗಳೂರು ವಿಭಾಗದ ಎನ್‌ಎಸ್‌ಎಸ್ ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಹೇಳಿದರು.
ನಡ್ಯೋಡಿ ಸರಕಾರಿ ಪ್ರಾಥಮಿಕ ಶಾಲೆ ಮಾರ್ಪಾಡಿ ಇಲ್ಲಿ ಶನಿವಾರ ಆರಂಭಗೊಂಡ ಎಕ್ಸಲೆಂಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಗುರು ಹಿರಿಯರಿಯರನ್ನು ಗೌರವಿಸುತ್ತಾ ಅವರ ಮಾರ್ಗದರ್ಶನದಲ್ಲಿ ಬೆಳೆಯುಬೇಕಾದದ್ದು ಇಂದಿನ ಯುಜನತೆಯ ಆದ್ಯತೆಯಾಗಿದೆ. ಹೆಣ್ಣು ಸಮಾಜದ ಬದಲಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾಳೆ. ಇಂತಹ ಸಾಧ್ಯತೆಯಿರುವ ನಾರಿ ಶಕ್ತಿ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು. ಪುರುಷರು ಹೆಣ್ಮಕ್ಕಳಿಗೆ ಗೌರವ ಕೊಡಬೇಕು ಎಂದರು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಸಮಾಜ ಸೇವೆ, ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವ ಶಿಕ್ಷಣ ಎನ್‌ಎಸ್‌ಎಸ್ ಶಿಬಿರ ಕಲಿಸಿಕೊಡುತ್ತದೆ. ಮಕ್ಕಳು ಕೇವಲ ಪುಸ್ತಕದ ಹುಳುಗಳಾಗದೆ ಜೀವನದ ಶಿಕ್ಷಣವನ್ನು ಕಲಿಯಬೇಕು. ಅದಕ್ಕೆ ಇಂತಹ ಶಿಬಿರಗಳು ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ನಡ್ಯೋಡಿ ಶಾಲೆಯಲ್ಲಿ ಆರಂಭಗೊಂಡ ಎನ್‌ಎಸ್‌ಎಸ್ ಶಿಬಿರಕ್ಕೆ ಇಲ್ಲಿನ ಊರವರು ನೀಡಿದ ಸಹಕಾರಕ್ಕೆ ಪ್ರಶಂಶೆ ವ್ಯಕ್ತಪಡಿಸಿದರು.
ಉದ್ಯಮಿ ಶ್ರೀಪತಿ ಭಟ್, ನಡ್ಯೋಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸವಿತಾ ಸತೀಶ್, ಶಾಲಾ ಮುಖ್ಯೋಪಧ್ಯಾಯಿನಿ ಉಷಾಲತಾ, ಸಲಹಾ ಸಮಿತಿ ಅಧ್ಯಕ್ಷ ದಿಲೀಪ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತೇಶ್, ಎನ್‌ಎಸ್‌ಎಸ್ ವಿದ್ಯಾರ್ಥಿ ಪ್ರತಿನಿಧಿಗಳಾದ ಅಪೇಕ್ಷ ಮತ್ತು ಅಭಿನವ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ತೇಜಸ್ವಿ ಭಟ್ ಸ್ವಾಗತಿಸಿದರು. ಎಕ್ಸಲೆಂಟ್ ಕಾಲೇಜಿನ ಪ್ರಾಚಾರ್ಯ ಪ್ರದೀಪ್ ಶೆಟ್ಟಿ ವಂದಿಸಿದರು. ವಿಕ್ರಮ್ ನಿರೂಪಿಸಿದರು.