ಕಾರ್ಕಳದ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಹಾಗೂ ರಾಜಾಪುರ ಸಾರಸ್ವತ ಎಜುಕೇಶನ್ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು ರೂ. 14.39 ಲಕ್ಷ ವಿದ್ಯಾರ್ಥಿವೇತನ ವಿತರಣೆಯು ನ. 10ರಂದು ಸೊಸೈಟಿಯ ರಾಜಾಪುರ ಸಭಾಭವನದಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೊಂಕಣ ರೈಲ್ವೆಯಲ್ಲಿ ಮುಖ್ಯ ಇಂಜಿನಿಯರ್ ಆಗಿ ನಿವೃತ್ತರಾದ ರಘುನಾಥ ನಾಯಕ್ ಎಣ್ಣೆಹೊಳೆ ನೆರೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಸಂಘ ಸಂಸ್ಥೆಗಳನ್ನು ಹಾಗೂ ಮಹನೀಯರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದರ ಜೊತೆಗೆ ಬಿಡುವಿನ ವೇಳೆಯಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಶಿಸ್ತು ಹಾಗೂ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸೊಸೈಟಿಯ ಅಧ್ಯಕ್ಷರಾದ ಕಡಾರಿ ರವಿಂದ್ರ ಪ್ರಭುರವರು ಕಳೆದ 14 ವರ್ಷಗಳಿಂದ ಸುಮಾರು 1.14ಕೋಟಿ ರೂಪಾಯಿ ವಿದ್ಯಾರ್ಥಿವೇತನ ವಿತರಿಸಲಾಗಿದೆ. ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದ ಅವರು ಶಿಕ್ಷಣಕ್ಕೆ ಸಹಾಯ ಮಾಡಿದ ಸಂಘ ಸಂಸ್ಥೆಗಳೊಂದಿಗೆ ನಿಕಟಸಂಪರ್ಕ ಇಟ್ಟುಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಾದ ಕವಿತಾ ನಾಯಕ್ ಬೆಳ್ಮಣ್, ಕೃತಿಕಾ ಕೆ. ರೆಂಜದಕಟ್ಟೆ ತೀರ್ಥಹಳ್ಳಿ ಹಾಗೂ ನಿಧಿ ಪ್ರಭು ಸೂಡ ಇವರನ್ನು ಅಭಿನಂದಿಸಿ ಗೌರವಿಸಲಾಯಿತು. ಒಟ್ಟು 192ವಿದ್ಯಾರ್ಥಿಗಳಿಗೆ ಸೊಸೈಟಿ ಹಾಗೂ ಟ್ರಸ್ಟ್ ವತಿಯಿಂದ ಒಟ್ಟು ರೂ. 14.39ಲಕ್ಷ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಂದ್ರ ನಾಯಕ್, ನಿರ್ದೇಶಕರಾದ ಹರಿಶ್ಚಂದ್ರ ತೆಂಡುಲ್ಕರ್ ಮಾಳ, ಸದಾನಂದ ಪಾಟ್ಕರ್ ಬಜಗೋಳಿ, ಇಂದುಮತಿ ಜಿ. ಪ್ರಭು ಜೋಡುರಸ್ತೆ, ರಾಮಕೃಷ್ಣ ತೆಂಡುಲ್ಕರ್ ಹಿರ್ಗಾನ, ಕಲಾವತಿ ಯು. ನಾಯಕ್ ಹಿರ್ಗಾನ, ಸಚ್ಚಿದಾನಂದ ಪ್ರಭು ಕಣಂಜಾರು, ಮಂಜುನಾಥ ಪ್ರಭು ಹೆಬ್ರಿ, ಸುನಿಲ್ ನಾಯಕ್ ಮಟ್ಟಾರ್, ರಮಾನಾಥ್ ನಾಯಕ್ ಕುಕ್ಕುಂದೂರು, ರಂಜಿತ್ ಕುಮಾರ್ ಪೆರ್ಡೂರು, ದೇವೇಂದ್ರ ಕಾಮತ್ ಎಳ್ಳಾರೆ, ಹರೀಶ್ ಬಿ. ನಾಯಕ್ ಪಳ್ಳಿ, ದಿನೇಶ್ ನಾಯಕ್ ಹೆರ್ಮುಂಡೆ ಹಾಗೂ ರಾಜಾಪುರ ಸಾರಸ್ವತ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಾದ ನಿವೃತ್ತ ಪ್ರಾಂಶುಪಾಲ ವೈ. ಪಾಂಡುರಂಗ ನಾಯಕ್ ಎಣ್ಣೆಹೊಳೆ, ಬಾಲಕೃಷ್ಣ ನಾಯಕ್ ಕುಕ್ಕುಂದೂರು, ಕೊರಗಪ್ಪ ನಾಯಕ್ ಹೆರ್ಮುಂಡೆ, ಸರ್ವೋತ್ತಮ ಸಾಲ್ವಂಕರ್ ಶಿರ್ಲಾಲು ಉಪಸ್ಥಿತರಿದ್ದರು.
ಹಿರಿಯ ವ್ಯವಸ್ಥಾಪಕರಾದ ಉದಯ ಪ್ರಭು ಕಾರ್ಯಕ್ರಮ ನಿರೂಪಿಸಿದರು. ರಾಜಾಪುರ ಸಾರಸ್ವತ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ನಿವೃತ್ತ ಪ್ರಾಂಶುಪಾಲ ಎಸ್. ಗೋವಿಂದ ಪ್ರಭು ಸ್ವಾಗತಿಸಿ ಪ್ರಸ್ತಾವನೆಗೈದರು. ಸೊಸೈಟಿಯ ಉಪಾಧ್ಯಕ್ಷರಾದ ನೀರೆ ರವೀಂದ್ರ ನಾಯಕ್ ಅಭಿನಂದನಾ ಭಾಷಣ ನೆರವೇರಿಸಿದರು. ಬೆಳ್ಮಣ್ ಶಾಖೆಯ ವ್ಯವಸ್ಥಾಪಕರಾದ ಗಣೇಶ್ ನಾಯಕ್ ಧನ್ಯವಾದ ಸಲ್ಲಿಸಿದರು.