ಶಿರ್ತಾಡಿಯಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡದ ಶಿಲಾನ್ಯಾಸ ಸಮಾರಂಭ ಹಾಗೂ ಸಂಜೀವಿನಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಇಂದು ಶಿರ್ತಾಡಿಯ ಪೇಟೆಯಲ್ಲಿ ಜರುಗಿತು.
ಶಿರ್ತಾಡಿ ಪಂಚಾಯತ್ ಅಧ್ಯಕ್ಷರಾದ ಆಗ್ನೇಸ್ ಡಿಸೋಜ ಅಧ್ಯಕ್ಷತೆ ವಹಿಸಿ ನೂತನ ಸಂಜೀವಿನಿ ಕಟ್ಟಡವನ್ನು ಉದ್ಘಾಟಿಸಿ ಗ್ರಾಮದ ಅಭಿವೃದ್ಧಿಯಲ್ಲಿ ಸರ್ವರ ಪಾತ್ರವನ್ನು ಸ್ಮರಿಸಿದರು.
ಪಂಚಾಯತ್‌ದ ಹಿರಿಯ ಸದಸ್ಯ ಎಸ್. ಪ್ರವೀಣ್ ಕುಮಾರ್ ಬಸ್ಸು ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಿದರು.
ಮಂಡಲ ಪಂಚಾಯತ್ ಮಾಜಿ ಅಧ್ಯಕ್ಷ ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ ಮಾತನಾಡಿ ಶಿರ್ತಾಡಿ ಧರ್ಮಸಾಮ್ರಾಜ್ಯರವರು ಪಂಚಾಯತ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಂಚಾಯತು ಪ್ರಾಥಮಿಕ ಆರೋಗ್ಯ ಕೇಂದ್ರ, ಬಸ್ ನಿಲ್ದಾಣ, ವೈದ್ಯರ ವಸತಿ ನಿಲಯ, ಅರಣ್ಯ, ಕೃಷಿ, ಮೆಸ್ಕಾಂನ ಸೆಕ್ಷನ್ ಕಚೇರಿ ಮುಂತಾದ ಅಗತ್ಯ ಸರಕಾರಿ ಕಚೇರಿಗಳಿಗೆ ಜಾಗವನ್ನು ಗುರುತಿಸಿ ಮೀಸಲಿಟ್ಟಿರುವುದನ್ನು ಸ್ಮರಿಸಿದರು.
ಶಿರ್ತಾಡಿಯ ಅಭಿವೃದ್ಧಿಯಲ್ಲಿ ಪಂಚಾಯತ್ ಪ್ರತಿನಿಧಿಗಳು ತೋರುವ ಉತ್ಸಾಹಕ್ಕೆ ಅಭಿನಂದನೆ ಸಲ್ಲಿಸಿದರು.
ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ ಪಂಚಾಯತ್‌ಗೆ ಹವಾನಿಯಂತ್ರಿತ ಸುಸಜ್ಜಿತ ಕಟ್ಟಡ, ಹೈಬ್ರಿಡ್ ಸೋಲಾರ್, ಕೂಡು ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ, ಕಸ ವಿಲೇವಾರಿ ವಾಹನ ಸೇರಿದಂತೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಿರುವುದಾಗಿ ತಿಳಿಸಿದರು. ಗ್ರಾಮದ ಜನರ ಬಹುವರ್ಷಗಳ ಬೇಡಿಕೆಯನ್ನು ಸತತ ಪ್ರಯತ್ನದ ಮೂಲಕ ರಾಜಕೀಯ ಬೇಧ ಮರೆತು ಸುಸಜ್ಜಿತವಾಗಿ ರೂಪಿಸಲು ಪಣತೊಟ್ಟಿರುವುದಾಗಿ ತಿಳಿಸಿದರು.
ಭುವನಜ್ಯೋತಿ ವಸತಿ ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್ ಡಿಸೋಜಾ, ನವಮೈತ್ರಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸತೀಶ್ ವಿ.ಶೆಟ್ಟಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ನಳಿನಿ ರಮೇಶ್ ಶುಭ ಹಾರೈಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಾಮೋದರ್, ಸದಸ್ಯರಾದ ಲತಾ ಹೆಗ್ಡೆ, ನಾಗವೇಣಿ, ಸಂತೋಷ್ ಶೆಟ್ಟಿ, ರಾಜೇಶ್ ಡಿಸೋಜ, ದಿನೇಶ್ ಶೆಟ್ಟಿ ತಿಮಾರ್, ಶಶಿಕಲಾ, ದೇವಕಿ, ಶೀನ ವೇದಿಕೆಯಲ್ಲಿದ್ದರು.
ಪ್ರಮೀಳಾ ಪ್ರಾರ್ಥನೆಗೈದರು. ಪ್ರತಿಭಾ ಸ್ವಾಗತಿಸಿದರು. ಅಕ್ಷಯ್ ಧನ್ಯವಾದವಿತ್ತರು. ಜಗದೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಗುತ್ತಿಗೆದಾರ ಅಜಯ್, ದೀಕ್ಷಿತ್ ಶೆಟ್ಟಿ, ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ವೇದಮೂರ್ತಿ ಉಮೇಶ್ ಭಟ್ ಪೂಜಾ ವಿಧಿವಿಧಾನ ನೆರವೇರಿಸಿದರು.