
ಮೂಡುಬಿದಿರೆ ಪುತ್ತಿಗೆಯ ಇತಿಹಾಸ ಪ್ರಸಿದ್ಧ ಹದಿನೆಂಟು ಮಾಗಣೆಗಳ ಒಡೆಯ,ಚೌಟರ ಸೀಮೆಯ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥ ದೇವಸ್ಥಾನದ ಪುನರ್ ಪ್ರತಿಷ್ಠಾ ಹಾಗೂ ಬ್ರಹ್ಮಕಲಶದ ಭಿತ್ತಿಪತ್ರ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮವು ಶುಕ್ರವಾರ ಪುತ್ತಿಗೆ ದೇಗುಲದ ಆವರಣದಲ್ಲಿ ನಡೆಯಿತು.

‘ಪುತ್ತೆ’ ಎಂಬ ಹೆಸರಿನ ಭಿತ್ತಿಪತ್ರ ಮತ್ತು ಲಾಂಛನವನ್ನು ಹಿರಿಯ ಕರ ಸೇವಕರಾದ ಗಂಗಯ್ಯ ಗೌಡ ಪಾದೆಮನೆ ಹಾಗೂ ವಿಠ್ಠಲ ಗೌಡ ಪುತ್ತಿಗೆ ಬೀಡು ಅವರು ಅನಾವರಣಗೊಳಿಸಿದರು.
ದೇವಸ್ಥಾನದ ಅನುವಂಶಿಕ ಮೊಕ್ತೇಸರ, ಚೌಟರ ಅರಮನೆಯ ಕುಲದೀಪ್ ಎಂ. ಮಾತನಾಡಿ ಫೆ.28 ರಿಂದ ಮಾರ್ಚ್ 7 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ಪುನರ್ ಪ್ರತಿಷ್ಠೆ ನಡೆಯಲಿದೆ. ಪುರಾಣ ಪ್ರಸಿದ್ಧ ಹೆಸರಾದ “ಪುತ್ತೆ” ಎಂಬ ಹೆಸರಿನೊಂದಿಗೆ ಕ್ಷೇತ್ರವು ಅನಾದಿ ಕಾಲದಿಂದಲೂ ಗುರುತಿಸಿಕೊಂಡು ಬಂದಿತು. ಆದರೆ ಇದೀಗ ಆ ಹೆಸರು ಅಳಿವಿನ ಅಂಚಿಗೆ ತಲುಪಿದ್ದು, ಅದನ್ನು ಮತ್ತೊಮ್ಮೆ ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ “ಪುತ್ತೆ” ಎಂಬ ಹೆಸರಿನ ಭಿತ್ತಿಪತ್ರ ಮತ್ತು ಲಾಂಛನವನ್ನು ಹಿರಿಯ ಕರಸೇವಕರ ಕೈಯಲ್ಲಿ ಬಿಡುಗಡೆಗೊಳಿಸಲಾಗಿದೆ. ದೇವಾಲಯದ ಅಭಿವೃದ್ಧಿ ಕಾರ್ಯಗಳು ಹೆಚ್ಚಿನವು ಬಾಕಿಯಿದೆ. ಆದ್ದರಿಂದ ಭಕ್ತಾದಿಗಳು ಬ್ರಹ್ಮಕಲಶಕ್ಕೆ ಮುಂಚಿತವಾಗಿ ಬಂದು ಕರ ಸೇವೆಯಲ್ಲಿ ಭಾಗಿಯಾಗಿಯಾದರೆ ಉತ್ತಮ ಎಂದರು.
ಇದಕ್ಕೂ ಮೊದಲು ರಕ್ತೇಶ್ವರಿ ದೈವದ ನೂತನ ಗುಡಿಗೆ ಶಿಲಾನ್ಯಾಸ ನೇರವೇರಿಸಲಾಯಿತು.
ಮಾಜಿ ಸಚಿವ ಅಭಯಚಂದ್ರ ಜೈನ್, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿ ಶ್ರೀಪತಿ ಭಟ್, ಜಯಶ್ರೀ ಅಮರನಾಥ್ ಶೆಟ್ಟಿ, ಪ್ರಧಾನ ಅರ್ಚಕ ಅಡಿಗಳ್ ಅನಂತಕೃಷ್ಣ ಭಟ್, ಶಿವಪ್ರಸಾದ್ ಆಚಾಯ೯, ವಾದಿರಾಜ್ ಮಡ್ಮಣಾಯ, ವಿದ್ಯಾರಮೇಶ್ ಭಟ್, ಪ್ರಶಾಂತ್ ಭಂಡಾರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಸಂದೀಪ್ ಶೆಟ್ಟಿ ಪುತ್ತಿಗೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.