ಅಭಿವೃದ್ಧಿಪರ ಚಿಂತನೆ ಮತ್ತು ಸಾಮಾಜಿಕ ನ್ಯಾಯದ ವ್ಯವಸ್ಥೆಯನ್ನು ಎತ್ತಿಹಿಡಿಯುವ ಗುರಿಯೊಂದಿಗೆ ರಾಜ್ಯದ ಜನರ ನಿದ್ದೆ ಕೆಡಿಸುತ್ತಿದ್ದ 6 ಮಂದಿ ನಕ್ಸಲೀಯರನ್ನು ಶರಣಾಗಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾರ್ಯತಂತ್ರ ಸ್ವಾಗತಾರ್ಹ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಆದರೆ ಸಾಮಾಜಿಕ ಸಂಘರ್ಷ ಅಶಾಂತಿ ಅಸಮಾನತೆ ಬಂಡವಾಳ ಶಾಹಿತ್ವವನ್ನೇ ತಮ್ಮ ರಾಜಕೀಯದ ಅಂತಶಕ್ತಿಯನ್ನಾಗಿಸಿಕೊಂಡಿರುವ ಬಿಜೆಪಿ ನಾಯಕರಿಗೆ ನಕ್ಸಲ್ ಶರಣಾಗತಿ ನಿರಾಶೆ ತಂದಿದೆ. ತಮ್ಮ ಆಡಳಿತಾವದಿಯಲ್ಲಿ ತಮ್ಮ ಕಛೇರಿಗಳನ್ನು ತಾಲಿಬಾನ್ ಸಂಸ್ಕೃತಿಯ ಪೊಲಿಟ್ ಬ್ಯೂರೋ ಆಗಿಸಿಕೊಂಡಿದ್ದವರಿಗೆ ಕಾಂಗ್ರೆಸ್ಸಿನ ಈ ಮಹತ್ತರ ಸಾಧನೆ ಒಂದು ಪ್ರಹಸನವಾಗಿ, ಮುಖ್ಯಮಂತ್ರಿಗಳ ಕಛೇರಿ ನಗರ ನಕ್ಸಲರ ಪೊಲಿಟ್ ಬ್ಯೂರೋ ಆಗಿ ಕಂಡು ಬಂದಿರುವುದರಲ್ಲಿ ಆಶ್ಚರ್ಯವಿಲ್ಲ.
ಬಹು:ಶ 1999ರ ಕಂದಾಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಅಂದಿನ ಸರಕಾರ ದೇಶದ್ರೋಹ ಪ್ರಕರಣದಡಿ ಸೆರೆಮನೆಯಲ್ಲಿದ್ದ ಮಸೂದ್ ಅಝರ್, ಉಮರ್ ಸಹೀದ್, ಮುಸ್ತಾಕಾ ಅಹಮ್ಮದ್ ರಂತಹ ಮಹಾ ಉಗ್ರವಾದಿಗಳನ್ನು ಸೆರೆಮನೆಯಿಂದ ಬಿಡಿಸಿ ವಿಮಾನ ಅಪಹರಣಗಾರರಿಗೆ ಒಪ್ಪಿಸಿದ ಅಂದಿನ ಪ್ರಧಾನಿ ಅಟಿಲ್ ಬಿಹಾರಿ ವಾಜಪೇಯಿಯವರ ಸಂಧಾನ ಪ್ರಕ್ರಿಯೆ ಬಿಜೆಪಿ ನಾಯಕರಾದ ಸುನೀಲ್ ಕುಮಾರ್, ಸಿಟಿ ರವಿ ಯಂತವರಿಗೆ ಮರೆತು ಹೋಗಿರ ಬೇಕು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಮಾವೋವಾದಿ ಸಿದ್ಧಾಂತದಡಿ ನಕ್ಸಲರು ನಡೆಸುತ್ತಿರುವ ಶಸ್ತ್ರಸಜ್ಜಿತ ಬಂಡಾಯದ ಹೋರಾಟವನ್ನು ಕ್ಷಿಪ್ರ ಕಾರ್ಯಾಚರಣೆಗಳ ಮೂಲಕ ನಿಗ್ರಹಿಸುವುದು ಸಮಸ್ಯೆಯೇನಲ್ಲ. ಆದರೆ ರಕ್ತವನ್ನು ರಕ್ತದಿಂದ ಅಳಿಸುವುದು ಪ್ರಜಾತಂತ್ರದ ಲಕ್ಷಣವಲ್ಲ. ಬಂಡುಕೋರರನ್ನು ಶಾಂತಿ ಸಂಧಾನದ ಮೂಲಕ ಶರಣಾಗಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಸರಕಾರಗಳ ಕರ್ತವ್ಯ.
ಪ್ರಸಕ್ತ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ತೆಗೆದುಕೊಂಡ ನಿರ್ಧಾರ ಕಾಲೋಚಿತವಾಗಿದ್ದು ಇದನ್ನು ಸರಕಾರದ ಶರಣಾಗತಿಯೆಂದು ಪರಿಗಣಿಸಲಾಗದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.