ಶಿರ್ತಾಡಿ: ಗ್ರಾಮಸ್ಥರ ಅಹವಾಲುಗಳನ್ನು ಕೇಳಬೇಕಾದ ಹೆಚ್ಚಿನ ಅಧಿಕಾರಿಗಳು ಗೈರು ಹಾಜರಾದ್ದರಿಂದ ಇಂದು ನಡೆಯಬೇಕಾಗಿದ್ದ ಶಿರ್ತಾಡಿ ಗ್ರಾಮ ಸಭೆ ರದ್ದುಗೊಂಡಿದೆ.
ಪಂಚಾಯತ್ ಅಧ್ಯಕ್ಷೆ ಆಗ್ನೇಸ್ ಡಿಸೋಜಾ ಅಧ್ಯಕ್ಷತೆಯಲ್ಲಿ ಇಂದು ಗ್ರಾಮ ಸಭೆ ನಿಗದಿಯಾಗಿತ್ತು. ಮೆಸ್ಕಾಂ, ಆರೋಗ್ಯ, ಅರಣ್ಯ, ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಹೆಚ್ಚಿನ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ಇದು ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರ ಅಸಮಧಾನಕ್ಕೆ ಕಾರಣವಾಯಿತು. ಅಧಿಕಾರಿಗಳು ಬರದಿದ್ದರೆ ಸಭೆ ನಡೆಸುವುದು ಬೇಡ ಎಂದು ಗ್ರಾಮಸ್ಥರು ಹೇಳಿದರು. ಎಲ್ಲಾ ಅಧಿಕಾರಿಗಳಿಗೆ ಮುಂಚಿತವಾಗಿ ಸಭೆಯ ನೋಟಿಸ್ ನೀಡಿ ಆಹ್ವಾನಿಸಲಾಗಿದೆ, ಮೊಬೈಲ್‌ನಲ್ಲಿ ಕರೆ ಮಾಡಿಯು ತಿಳಿಸಲಾಗಿದೆ. ಆದರೂ ಕೆಲವು ಅಧಿಕಾರಿಗಳು ಗೈರು ಹಾಜರಾಗಿದ್ದಾರೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.
ಕೊನೆಗೆ ಸಭೆಯನ್ನು ಮುಂದೂಡಲಾಯಿತು. ಮುಂದಿನ 15 ದಿನಗಳೊಳಗೆ ಪ್ರತ್ಯೇಕ ಸಭೆ ಕರೆದು ಅಧಿಕಾರಿಗಳನ್ನು ಆಹ್ವಾನಿಸುವುದೆಂದು ನಿರ್ಣಯಿಸಲಾಯಿತು.
ಬೆಳುವಾಯಿ ಗ್ರಾಮ ಸಭೆಯು ರದ್ದು:ಹೆಚ್ಚಿನ ಇಲಾಖಾಧಿಕಾರಿಗಳು ಗೈರು ಹಾಜರಾಗಿದ್ದರಿಂದ ಸೋಮವಾರ ನಡೆಯಬೇಕಾಗಿದ್ದ ಬೆಳುವಾಯಿ ಗ್ರಾಮ ಸಭೆ ಕೂಡ ರದ್ದುಗೊಂಡಿತ್ತು.