ಬೈಲೂರು: ಕಾರ್ಕಳ ಬಿಜೆಪಿ ಯುವ ಮೋರ್ಚಾದ ವತಿಯಿಂದ ಬೈಲೂರು ಪರಶುರಾಮ ಥೀಮ್ ಪಾರ್ಕ್‌ನ
ಕಾಂಗ್ರೆಸ್‌ನ ಅಭಿವೃದ್ಧಿ ವಿರೋಧಿ ನಿಲುವಿನ ಬಗ್ಗೆ ಪ್ರತಿಭಟನೆಯು ಬೈಲೂರು ಪೇಟೆಯಲ್ಲಿ ಫೆ. 6ರಂದು ನಡೆಯಿತು.
ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ಮಾತನಾಡಿ ಲಕ್ಷಾಂತರ ಜನರು ವೀಕ್ಷಿಸಬೇಕಾಗಿದ್ದ ಥೀಮ್ ಪಾರ್ಕ್ ಇಂದು ಕಾಂಗ್ರೆಸ್ಸಿನ ಅಭಿವೃದ್ಧಿ ವಿರೋಧಿ ನೀತಿಯಿಂದ ಅರ್ಧ ಮೂರ್ತಿ ನಿಲ್ಲುವಂತಾಗಿದೆ ಎಂದರು. ಅಭಿವೃದ್ಧಿ ಆಗಬೇಕಾಗಿದ್ದ ಥೀಮ್ ಪಾರ್ಕಿನ ರಸ್ತೆಗೆ ಮಣ್ಣು ಸುರಿಯುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕಿದೆ. ಇತ್ತೀಚೆಗೆ ಕಾರ್ಕಳಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಕಳದ ಅಭಿವೃದ್ಧಿಗೆ ಅನುದಾನ ಘೋಷಿಸುವ ಬದಲು ಪರಶುರಾಮನ ಮೂರ್ತಿಯನ್ನು ಮುಂದಿನ ಚು ನಾವಣೆಯವರೆಗೆ ಯಥಾ ಸ್ಥಿತಿ ಇರುವಂತೆ ಹೇಳಿರುವುದು ಅವರ ಅಭಿವೃದ್ಧಿಯ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದರು.
ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಮಾತನಾಡಿ ಕಳೆದ ವಿಧಾನಸಭೆ ಚುನಾವಣೆಯ ನಂತರ ಕಾರ್ಕಳದಲ್ಲಿ ಧರ್ಮ ರಾಜಕೀಯ ಮರೆತು ದ್ವೇಷ ರಾಜಕಾರಣ ಆರಂಭಗೊಂಡಿದೆ. ಕಾಂಗ್ರೆಸ್ಸಿಗರ ದ್ವೇಷ, ಅಸೂಯೆ ರಾಜಕಾರಣಕ್ಕೆ ಬೈಲೂರು ಪರಶುರಾಮ ಥೀಮ್ ಪಾರ್ಕ್ ಪಾಲು ಬೀಳುವಂತಾಗಿದೆ ಎಂದರು. ಬಿಜೆಪಿಯ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೆಳೆಯುವ ನೆಪದಲ್ಲಿ ಬಿಜೆಪಿಯವರ ವ್ಯವಹಾರದಲ್ಲಿ ಅಡ್ಡಗಾಲು ಹಾಕುತ್ತಿದೆ ಎಂದರು.
ಜಿಲ್ಲಾ ಬಿಜೆಪಿ ವಕ್ತಾರ ಮುಟ್ಲುಪಾಡಿ ಸತೀಶ್ ಶೆಟ್ಟಿ ಮಾತನಾಡಿ ಸುನಿಲ್ ಕುಮಾರ್ ಅಧಿಕಾರದಲ್ಲಿದ್ದಾಗ ಕಾರ್ಕಳ ಸಮಗ್ರ ಅಭಿವೃದ್ಧಿ ಕಂಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಯು ಶೂನ್ಯವಾಗಿದೆ ಎಂದರು. ಹಿಂದುಳಿದ ವರ್ಗದ, ವಾಲ್ಮೀಕಿ ನಿಗಮದ, ಪರಿಶಿಷ್ಟ ಜಾತಿ ಪಂಗಡಗಳ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ ಎಂದು ಆರೋಪಿಸಿದರು. ದ್ವೇಷ ರಾಜಕಾರಣ ಮಾಡಿ ವೋಟು ಪಡೆಯಲು ಸಾಧ್ಯವಿಲ್ಲ, ಅಭಿವೃದ್ಧಿ ಮಾಡಿ ಜನರಿಂದ ವೋಟು ಪಡೆಯಲು ಸಾಧ್ಯ ಎಂದು ಕಾಂಗ್ರೆಸಿಗರಿಗೆ ಕಿವಿಮಾತು ಹೇಳಿದರು.
ಮಾಜಿ ಮಂಡಲ ಅಧ್ಯಕ್ಷ ಮಣಿರಾಜ ಶೆಟ್ಟಿ ಮಾತನಾಡಿ ಸುನಿಲ್ ಕುಮಾರ್ ಶಾಸಕರಾಗಿ ಸಚಿವರಾಗಿ ಕಾರ್ಕಳದ ಮಾಡಿದ ಅಭಿವೃದ್ಧಿಯಲ್ಲಿ ಯಾವುದಾದರೂ ಒಂದು ಕೆಲಸವನ್ನು ಕಾಂಗ್ರೆಸ್ ಅವಧಿಯಲ್ಲಿ ನಡೆದಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸಿಗರ ದ್ವೇಷ ರಾಜಕಾರಣಕ್ಕೆ ಬೈಲೂರು ಪರಶುರಾಮ ಥೀಮ್ ಪಾರ್ಕ್ ಬಲಿಯಾಗಿದೆ ಎಂದರು.
ವಿಖ್ಯಾತ್ ಶೆಟ್ಟಿ, ಮಹೇಶ್ ಬೈಲೂರು, ಸುಮಿತ್ ಶೆಟ್ಟಿ, ಪ್ರಶಾಂತ್ ಕುಮಾರ್, ಜಯರಾಮ್ ಸಾಲಿಯಾನ್, ಪ್ರವೀಣ್ ಸಾಲಿಯಾನ್, ಉದಯ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು