ವಿಧಾನಸಭೆಯ ಅಧಿವೇಶನದಲ್ಲಿ ಶಾಸಕ ಸುನೀಲ್ ಕುಮಾರ್ ಶಾಸಕರನ್ನೇ ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಅಂಗಲಾಚುವುದನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ಮತ್ತು ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಎಷ್ಟು ಪ್ರಭಾವ ಬೀರುತಿದೆ ಎಂದು ಸ್ಪಷ್ಟವಾಗುತ್ತದೆ. ಮೊದಲಿನಿಂದಲೂ ಅಪಹಾಸ್ಯ ಮಾಡುತ್ತಿದ್ದ ಶಾಸಕರಿಗೆ ಈಗ ಜ್ಞಾನೋದಯವಾದಂತೆ ಕಾಣುತ್ತದೆ. ನಮ್ಮ ಶಾಸಕರಿಗೆ ಇಂತಹ ದುರ್ಗತಿ ಬರಬಾರದಿತ್ತು ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ ಮೊದಲು ಕಾಂಗ್ರೆಸ್ ನೀಡಿದ ಪಂಚ ಗ್ಯಾರಂಟಿ ಭರವಸೆಯನ್ನು ಜನರಿಗೆ ತಲುಪಿಸಲು ಸಾಧ್ಯವೇ ಇಲ್ಲ ಎಂದು ಗೇಲಿ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ದಿನವೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದಾಗ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯ ಎಂದು ಅಪಹಾಸ್ಯ ಮಾಡಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕರ್ನಾಟಕ ರಾಜ್ಯವ್ಯಾಪಿ ಯಶಸ್ವಿಯಾಗಿ ಪ್ರಚಾರ ಪಡೆದಾಗ ಅದೇ ಯೋಜನೆಗಳನ್ನು ಇತರ ರಾಜ್ಯಗಳಲ್ಲಿ ಬಿಜೆಪಿ ನಕಲು ಮಾಡಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದರು.
ಇಷ್ಟೆಲ್ಲಾ ಆದ ಬಳಿಕ ಈಗ ಅಂದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯಗಳು ಎಂದು ಬಡವರನ್ನು ಗೇಲಿ ಮಾಡಿದ ಸುನೀಲ್ ಕುಮಾರ್ ಸಹಿತ ಬಿಜೆಪಿ ನಾಯಕರುಗಳು ಇಂದು ಅದೇ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಗೆ ನಮ್ಮನ್ನು ಅಧ್ಯಕ್ಷರನ್ನಾಗಿ ಸೇರಿಸಿಕೊಳ್ಳಿ ಎಂದು ಅಂಗಾಲಾಚುತ್ತಿದ್ದಾರೆ. ಇವರಿಗೆ ಇಂತಹ ದುರ್ಗತಿ ಬೇಕಿತ್ತಾ, ಇನ್ನಾದರೂ ಮೊದಲು ಆಡಿದ ಮಾತಿಗೆ ಕ್ಷಮೆ ಕೇಳಿ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ.