ಮೂಡುಬಿದಿರೆ ಬಂಟರ ಸಂಘ ಮೂಡುಬಿದಿರೆ ಇದರ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಭಾನುವಾರ ಹೋಟೆಲ್ ಪಂಚರತ್ನ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ನಡೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಮುದಾಯದ ಇತಿಹಾಸವನ್ನು ಅರಿತುಕೊಳ್ಳುವುದರ ಜೊತೆಗೆ ಸಾಮೂಹಿಕ ಜವಾಬ್ದಾರಿಯನ್ನು ಮೈಗೂಡಿಸಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ. ಪೂರ್ವಜರು ಶಿಸ್ತುಬದ್ಧ ಜೀವನ ಪದ್ಧತಿಯನ್ನು ರೂಪಿಸಿ ಸಮುದಾಯಕ್ಕೆ ವಿಶಿಷ್ಟ ಶಕ್ತಿಯನ್ನು ನೀಡಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಪೀಳಿಗೆಯದಾಗಿದೆ.
ಶೋಭಾ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಪಾರದರ್ಶಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಮಾಜ ಸೇವೆಯ ಬದ್ಧತೆಯೊಂದಿಗೆ ಸಂಘಟನೆ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಹೇಳಿದರು.

ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ ಕಾಂತಿ ಶೆಟ್ಟಿ ಪದಗ್ರಹಣಾಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ, ಶೋಭಾ ಹೆಗ್ಡೆ ಮತ್ತು ಅವರ ತಂಡ ಇಷ್ಟು ಜನರನ್ನು ಒಗ್ಗೂಡಿಸಿ ಸಂಘಟಿತವಾಗಿ ಕೆಲಸ ಆರಂಭಿಸಿರುವುದು ಪ್ರಶಂಸನೀಯವಾಗಿದೆ. ಸಮಾಜ ಸೇವೆಗೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಂಕಷ್ಟದಲ್ಲಿರುವವರಿಗೆ ಸಹಾಯ, ವಿಧವೆಯರು ಹಾಗೂ ಒಂಟಿ ಪೋಷಕರಿಗೆ ನೆರವು ನೀಡುವಂತಹ ಕಾರ್ಯಗಳನ್ನು ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ಆಶ್ರಯ ಯೋಜನೆಗಳಂತಹ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯವರಿಗೆ ತಲುಪಿಸುವ ಕಾರ್ಯವೂ ನಡೆಯಬೇಕು ಎಂದು ಸಲಹೆ ನೀಡಿದರು.
ಬಂಟರ ಸಂಘ ಮೂಡುಬಿದಿರೆ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಶೋಭಾ ಎಸ್. ಹೆಗ್ಡೆ, ಕಾರ್ಯದರ್ಶಿಯಾಗಿ ಸಂಗೀತಾ ಶೆಟ್ಟಿ, ಕೋಶಾಧಿಕಾರಿಯಾಗಿ ಗೀತಾ ಪಿ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಸ್ವೀಕರಿಸಿದರು.
ಬಂಟರ ಮಾತೃಸಂಘದ ಪ್ರತಿನಿಧಿ ವಸಂತ್ ಶೆಟ್ಟಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ಗೌರವ ಸಲಹೆಗಾರ್ತಿ ಕಾಂತಿಲತಾ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸುಚರಿತ ಶೆಟ್ಟಿ, ಯುವ ಬಂಟರ ಸಂಘ ಮೂಡುಬಿದಿರೆ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಬಂಟರ ಸಂಘದ ಕೋಶಾಧಿಕಾರಿ ಎಂ. ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು.
ಸನ್ಮಾನ: ರಾಷ್ಟ್ರಮಟ್ಟದ ಬಂಟರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮೂಡುಬಿದಿರೆ ಬಂಟರ ಸಂಘಕ್ಕೆ ಪ್ರಥಮ ಸ್ಥಾನ ಲಭಿಸಿದ್ದು, ನಿರ್ದೇಶನ ಮತ್ತು ಮಾರ್ಗದರ್ಶನ ನೀಡಿದ ಅನೀಶ್ ಪೂಜಾರಿ ಹಾಗೂ ಸ್ಮಿತೇಶ್ ಬಾರ್ಯ, ನಾಟಿ ವೈದ್ಯೆ, ಘಟಕದ ಹಿರಿಯ ಸದಸ್ಯೆ ನೀರಜಾಕ್ಷಿ ಎಸ್. ಶೆಟ್ಟಿ ಕಡಂದಲೆ, ಕ್ರೀಡಾ ಸಾಧಕಿ ವಿಸ್ಮಿತಾ ವಿ. ಶೆಟ್ಟಿ ಪಡುಮಾರ್ನಾಡು ಅವರನ್ನು ಸನ್ಮಾನಿಸಲಾಯಿತು.
ಅನಾರೋಗ್ಯದಿಂದ ಬಳಲುತ್ತಿರುವ ಅಲಂಗಾರಿನ ಶಾರದಾ ಶೆಟ್ಟಿ ಅವರಿಗೆ ಘಟಕದಿಂದ 15 ಸಾವಿರ ರೂ. ಧನಸಹಾಯ ನೀಡಲಾಯಿತು.
ಘಟಕದ ಉಪಾಧ್ಯಕ್ಷೆ ಪ್ರಫುಲ್ಲ ಶೆಟ್ಟಿ ಸ್ವಾಗತಿಸಿದರು. ರೋಹಿಣಿ ಶೆಟ್ಟಿ ಪದಗ್ರಹಣಾಧಿಕಾರಿಯನ್ನು ಪರಿಚಯಿಸಿದರು. ಅಮೃತಾ ಪಿ. ಹೆಗ್ಡೆ, ಸುರೇಖಾ ಶೆಟ್ಟಿ, ನಿಶಾ ಶೆಟ್ಟಿ ಹಾಗೂ ವೀಣಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ರಂಜಿತಾ ಶೆಟ್ಟಿ, ಮಂಜೂಷಾ ಶೆಟ್ಟಿ ಮತ್ತು ಶಿವಪ್ರಸಾದ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸಂಗೀತಾ ಶೆಟ್ಟಿ ವಂದಿಸಿದರು.
