ಮೂಡುಮಾರ್ನಾಡು: ಚೇತನ ಯುವಕ ಮಂಡಲ ತಂಡ್ರಕೆರೆ ಇದರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ 31ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಾಲಬೆಟ್ಟ ಗರಡಿಯ ಆಡಳಿತ ಮೊಕ್ತೇಸರರು ಮತ್ತು ಧರ್ಮದರ್ಶಿ ರಾಜೇಶ್ ಬಳ್ಳಾಲ್ ಅಧ್ಯಕ್ಷತೆಯಲ್ಲಿ ಮಾರ್ಚ್ 15 ರಂದು ನಡೆಯಿತು.

ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್ ಮೋಹನ್ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದೇಶದಲ್ಲಿರುವ ಬಡವ ಶ್ರೀಮಂತ, ಶಿಕ್ಷಣವಂತರು ಮತ್ತು ಅನಕ್ಷರಸ್ಥರುಗಳ ನಡುವೆ ಇರುವ ಕಂದಕವನ್ನು ದೂರ ಮಾಡಲು ಉಳ್ಳವರು ಬಲಹೀನರಿಗೆ ಶಕ್ತಿ ತುಂಬುವ ಕೆಲಸ ಆಗಬೇಕು. ದೇಶದಲ್ಲಿರುವ ಸುಮಾರು 52 ಕೋಟಿ ಯುವ ಸಮುದಾಯ ಸಮಾಜದ ಏಳಿಗೆಗಾಗಿ ಶ್ರಮವಹಿಸಬೇಕು ಎಂದರು. ಸಂಘರ್ಷದಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ. ಆರೋಗ್ಯ, ವಿದ್ಯೆಯನ್ನು ಸದೃಢಗೊಳಿಸಿಕೊಂಡಾಗ ದೇಶದ ಪ್ರಗತಿಗೆ ಅಡಿಪಾಯ ಕೊಟ್ಟಂತಾಗುತ್ತದೆ ಎಂದು ಹೇಳಿದರು.
ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಾಲಬೆಟ್ಟ ಗರಡಿಯ ಅಸ್ರಣ್ಣರಾದ ಅನಂತಪದ್ಮನಾಭ ಅಸ್ರಣ್ಣರು ಆಶೀರ್ವಚನ ನೀಡಿ ದೇವರಿಗೆ, ಸಮಾಜಕ್ಕೆ ನೀಡಿದ ಕಾಣಿಕೆ ಉತ್ತಮ ಫಲವಾಗಿ ನಮಗೆ ದೊರಕುತ್ತದೆ ಎಂದು ನುಡಿದರು.
‘ಮಾರ್ನಾಡಿನ ಸೇವಾ ಮಾಣಿಕ್ಯ’ ಕುವೈಟ್ ಉದ್ಯಮಿ ರಾಘು ಸಿ ಪೂಜಾರಿ ಮಾರ್ನಾಡು ಇವರಿಗೆ ಆಯೋಜಿಸಲಾದ ಹುಟ್ಟೂರಿನ ಸನ್ಮಾನ ವನ್ನು ಅವರ ಪುತ್ರ ರಕ್ಷಿತ್ ರಿಗೆ ಸಮರ್ಪಿಸಿ ಗೌರವಿಸಲಾಯಿತು.
ಕುವೈಟ್ ನಿಂದ ನೇರ ಪ್ರಸಾರದಲ್ಲಿ ಮಾತನಾಡಿದ ರಾಘು ಸಿ ಪೂಜಾರಿ ಅವರು ಯುದ್ಧ ಸಂಘರ್ಷದಿಂದಾಗಿ ವಿಮಾನ ಹಾರಾಟ ನಿಲುಗಡೆ ಹಿನ್ನೆಲೆಯಲ್ಲಿ ಹುಟ್ಟೂರಿಗೆ ಆಗಮಿಸಲು ಕಷ್ಟ ಸಾಧ್ಯವಾಯಿತು ಎಂದು ಹೇಳಿ ಪುತ್ರನನ್ನು ಗೌರವಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಚೇತನ ಯುವಕ ಮಂಡಲದ ಸೇವೆಯಲ್ಲಿ ಯುವಕರೊಂದಿಗೆ ನಿರಂತರ ಕೈಜೋಡಿಸುವುದಾಗಿ ಅವರು ಭರವಸೆಯಿತ್ತರು.
ಶ್ರೀ ಮಹಾ ಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪಕರಾದ ಸುಬ್ರಹ್ಮಣ್ಯ ಭಟ್, ಕೆಲ್ಲಪುತ್ತಿಗೆ ಶ್ರೀ ಕ್ಷೇತ್ರ ಭೂತರಾಜಗುಡ್ಡೆ ಆಡಳಿತ ಮೊಕ್ತೇಸರರು ಜಗದೀಶ್ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಹಿರಿಯ ಅಧಿಕಾರಿ ಯತೀಂದ್ರ ರಾವ್ ಪಾಡಿಮನೆ, ಪಡು ಮಾರ್ನಾಡು ಗ್ರಾಮ ಪಂಚಾಯತ ನಿಕಟಪೂರ್ವ ಅಧ್ಯಕ್ಷ ವಾಸುದೇವ ಭಟ್, ಮಾಜಿ ಅಧ್ಯಕ್ಷ ಶ್ರೀಮತಿ ಕಲ್ಯಾಣಿ, ರಾಯರ ಮನೆ ಬೆಂಗಳೂರು ಉದ್ಯಮಿ ಹೇಮರಾಜ್ ಯು ರಾವ್, ಚೇತನ ಯುವಕ ಮಂಡಲ ಅಧ್ಯಕ್ಷ ಸುನಿಲ್ ಬಿ ಪೂಜಾರಿ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ತಂಡ್ರಕೆರೆ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಸಮಾರಂಭದಲ್ಲಿ 25,000 ರೂಪಾಯಿ ಚೆಕ್ ನ್ನು ಶಾಲಾ ಅಧ್ಯಾಪಕ ವೃಂದದ ಮೂಲಕ ನೀಡಲಾಯಿತು.
ಕುಂಭಕಂಠಿಣಿ ಮಹಿಳಾ ಬಳಗದವರು ಪ್ರಾರ್ಥನೆಗೈದರು. ಯುವಕ ಮಂಡಲ ಪ್ರಮುಖರಾದ ರಾಜೇಶ್ ಗೋಲಾರ ಸ್ವಾಗತಿಸಿ, ಕೋಶಾಧಿಕಾರಿ ನವೀನ್ ಗರಡಿ ಬಳಿ ವರದಿ ಮಂಡಿಸಿದರು. ಅಧ್ಯಾಪಕ ನವೀನ್ ಬಂಗೇರ ಧನ್ಯವಾದವಿತ್ತರು. ನಿತೇಶ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು. ಯುವಕಮಂಡಲದ ಮಾಜಿ ಅಧ್ಯಕ್ಷ ದೇವರಾಜ್ ಸುವರ್ಣ ಪೊಸಲಾಯಿ ಹಾಗೂ ಪದಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಭಾ ಕಾರ್ಯಕ್ರಮದ ಮುಂಚಿತವಾಗಿ ಮತ್ತು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
