ಮೂಡುಬಿದಿರೆ

ವಾಹನ ಸಂಚಾರ ನಿಯಮಗಳ ಉಲ್ಲಂಘನೆಗೆ ಕೇಸು ಹಾಕಿ-  ಮೂಡುಬಿದಿರೆಯ ಸಾರ್ವಜನಿಕ ಸಮಸ್ಯೆಗಳ ಕುರಿತು ಸಮಾಲೋಚನಾ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್

ಮೂಡುಬಿದಿರೆಯ ನಗರದಲ್ಲಿ ವಾಹನಗಳ ಸಂಚಾರ ನಿಯಮ ಉಲ್ಲಂಘನೆಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ತಾಕೀತು ಮಾಡಿದರು. ಮೂಡುಬಿದಿರೆ ತಾಲ್ಲೂಕಿನ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ಸ್ಥಳ ಪರಿಶೀಲನೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹ, ಅಧ್ಯಯನ ಹಾಗೂ ಮನವಿಪತ್ರಗಳ ಮೂಲಕ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ “ನಮ್ಮ ಮೂಡುಬಿದಿರೆ ಫೋರಂ” ವತಿಯಿಂದ ಗುರುತಿಸಲಾದ 36 ಪ್ರಮುಖ ಸಾರ್ವಜನಿಕ ಸಮಸ್ಯೆಗಳ ಕುರಿತು ಕನ್ನಡ ಭವನದಲ್ಲಿ ನಡೆದ ಮಹತ್ವದ ಸಭೆ ಯಲ್ಲಿ ಅವರು ವಿವಿಧ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಪೊಲೀಸ್ ಇಲಾಖೆ, ತಾಲ್ಲೂಕು ಆಡಳಿತದ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕ ಪ್ರಮುಖರು ಭಾಗವಹಿಸಿದ್ದರು.

ಹಳೆ ಪೊಲೀಸ್ ಸ್ಟೇಷನ್ ಮುಂಭಾಗ ವಾಹನ ಸಂಚಾರ ಅನುಕೂಲ ಮಾಡಿಕೊಡಲು ಸರಳ ಡಿವೈಡರ್, ಮುಂಬೈ ಬಸ್, ಕೆ ಎಸ್ ಆರ್ ಟಿ ಸಿ ಬಸ್ ಸೇರಿದಂತೆ ದೊಡ್ಡ ಬಸ್ ಗಳು ಪುರಸಭಾ ಕಟ್ಟಡ ಮುಂಭಾಗವಾಗಿ ಅಥವಾ ಬಸ್ ನಿಲ್ದಾಣ ನಿರ್ಗಮನ ದ್ವಾರ ಮೂಲಕ ಚಲಿಸುವುದು, ಬಸ್ ನಿಲ್ದಾಣದಲ್ಲಿ ಕಾರುಗಳ ಅನದಿಕೃತ ನಿಲುಗಡೆಗೆ ದಂಡ ವಿಧಿಸುವುದು, ಗ್ರಾಮೀಣ ಭಾಗದ ರಿಕ್ಷಾಗಳ ನಗರ ಪಾರ್ಕಿಂಗ್ ನಿರ್ಬಂಧಿಸಲು ಅವರು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಮಸೀದಿ ರಸ್ತೆಯಲ್ಲಿ ಒಂದೇ ಬದಿ ಪಾರ್ಕಿಂಗ್ ಮಾಡುವುದು, ಹನುಮಾನ್ ದೇವಸ್ಥಾನದ ಮುಂಭಾಗ ಏಕಮುಖ ಸಂಚಾರ ಸೇರಿದಂತೆ ಕೆಲವು ನೋ ಎಂಟ್ರಿ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಅವರು ತಿಳಿಸಿದರು.

ನಮ್ಮ ಮೂಡುಬಿದಿರೆ ಫೋರಂ ಪರವಾಗಿ ಅಕ್ಷಯ್ ಕೆ. ಜೈನ್ ಅವರು ಮಾತನಾಡಿ ಕಳೆದ ಮೂರು ವರ್ಷಗಳಿಂದ ಸ್ಥಳೀಯವಾಗಿ ಅಧ್ಯಯನ ನಡೆಸಿ ಸಂಗ್ರಹಿಸಲಾದ 36 ಪ್ರಮುಖ ಸಮಸ್ಯೆಗಳ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಟ್ರಾಫಿಕ್ ಸಮಸ್ಯೆಗಳು, ಪಾರ್ಕಿಂಗ್ ಅವ್ಯವಸ್ಥೆ, ರಸ್ತೆ ಸುರಕ್ಷತೆ, ಚರಂಡಿ ವ್ಯವಸ್ಥೆ, ಸಾರ್ವಜನಿಕ ಆರೋಗ್ಯ, ತ್ಯಾಜ್ಯ ನಿರ್ವಹಣೆ, ವಿದ್ಯುತ್ ಸಮಸ್ಯೆಗಳು, ಪ್ರವಾಸೋದ್ಯಮ ಅಭಿವೃದ್ಧಿ, ಅಕ್ರಮ ಒತ್ತುವರಿ, ಸಾರ್ವಜನಿಕ ಮೂಲಸೌಕರ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿವರವಾದ ಮಾಹಿತಿಯನ್ನು ಅವರು ಸಭೆಯ ಗಮನಕ್ಕೆ ತಂದರು. ತಹಶೀಲ್ದಾರ್ ಶ್ರೀಧರ, ಮುಖ್ಯಾಧಿಕಾರಿ ಇಂದು ಎಂ. ಉಪಸ್ಥಿತರಿದ್ದರು. ಹಿರಿಯ ಉದ್ಯಮಿ ನಾರಾಯಣ ಪಿ ಎಂ, ನ್ಯಾಯವಾದಿ ಬಾಹುಬಲಿ ಪ್ರಸಾದ್, ಪುರಸಭಾ ಮಾಜಿ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ರೋಟರಿ ಅಧ್ಯಕ್ಷ ಹರೀಶ್ ಎಂ. ಕೆ, ಕಾರ್ಯದರ್ಶಿ ಭರತ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ವಿವೇಕ ಆಳ್ವ, ಅಮರ ಕೋಟೆ ಮತ್ತಿತರರು ಸಭೆಯಲ್ಲಿದ್ದರು.

ಈ ಕಾರ್ಯದಲ್ಲಿ ಅಡ್ವೊಕೇಟ್ ಇರ್ಷಾದ್, ಯಾಸೀರ್, ಸಂಪತ್, ಪವನ್ ಹಾಗೂ ನಮ್ಮ ಮೂಡುಬಿದಿರೆ ಫೋರಂನ ಇತರ ಸದಸ್ಯರು ಸಹ ಭಾಗವಹಿಸಿ ನಿರಂತರವಾಗಿ ಸಾರ್ವಜನಿಕ ಸಮಸ್ಯೆಗಳ ದಾಖಲಾತಿ ಹಾಗೂ ವರದಿ ಸಿದ್ಧಪಡಿಸುವ ಕಾರ್ಯದಲ್ಲಿ ಸಹಕರಿಸಿದ್ದಾರೆ ಎಂದು ತಿಳಿಸಲಾಯಿತು.

ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯಗಳನ್ನು ಆಲಿಸಿದ ಶಾಸಕರು, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ಮೂಡುಬಿದಿರೆಯ ಪ್ರಮುಖ ಸಮಸ್ಯೆಗಳ ಕುರಿತು ಸಮಗ್ರವಾಗಿ ಅಧ್ಯಯನ ನಡೆಸಲು ಸಲಹಾ ಸಮಿತಿ (Advisory Committee) ರಚಿಸುವ ಬಗ್ಗೆ ಮಾರ್ಗದರ್ಶನ ನೀಡಿದರು.

ಈ ಸಮಿತಿಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕ  ಪ್ರತಿನಿಧಿಗಳು ಹಾಗೂ ಸಂಬಂಧಿತ ಇಲಾಖೆಗಳ ಸಹಭಾಗಿತ್ವದೊಂದಿಗೆ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕ್ರಮಗಳ ಕುರಿತು ಮುಂದಿನ 10 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಯಿತು.

ಸಭೆಯಲ್ಲಿ ಭಾಗವಹಿಸಿದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಮೂಡುಬಿದಿರೆಯ ಅಭಿವೃದ್ಧಿಗಾಗಿ ಕೈಗೊಳ್ಳಲಾಗುತ್ತಿರುವ ಈ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದರು.

Related posts

ಕರಾಟೆಯಲ್ಲಿ ಕವನ ಬ್ಲ್ಯಾಕ್ ಬೆಲ್ಟ್

Madhyama Bimba

ಪಣಪಿಲದಲ್ಲಿ ಆಧಾರ್, ರಕ್ಷಣೆ ಯೋಜನೆ

Madhyama Bimba

 ಕಲ್ಲಮುಂಡ್ಕೂರು ಸಹಕಾರಿ ಸಂಘ ಬಿಜೆಪಿ ಬೆಂಬಲಿತ ಮಡಿಲಿಗೆ- ಕಾಂಗ್ರೆಸ್ ಬೆಂಬಲಿತರಿಗೆ ಎರಡು ಸ್ಥಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More