ಅಕ್ರಮ ಸಕ್ರಮ ಸಮಿತಿಯ ಸಭೆ ಕುರಿತಂತೆ ಮೂಡುಬಿದ್ರಿಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ವಾಗ್ಯುದ್ಧ ತೀವ್ರಗೊಂಡಿದೆ. ಮೂಡುಬಿದರೆಯಲ್ಲಿ ಶಾಸಕ ಉಮಾನಾಥ ಎ ಕೋಟ್ಯಾನ್ ನೇತೃತ್ವದಲ್ಲಿರುವ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸುವಂತೆ ಒತ್ತಾಯಿಸಿ ಈಗಾಗಲೇ ಸಮಿತಿ ಸದಸ್ಯರಾದ ಮಿತ್ತಬೈಲು ವಾಸುದೇವ ನಾಯಕ್ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಕ್ರಮ ಸಕ್ರಮ ಸಮಿತಿ ರಚನೆಗೊಂಡರೂ ಸಭೆ ನಡೆಸುತ್ತಿಲ್ಲ ಎಂಬ ಆರೋಪದೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು ಸಭೆ ನಡೆಸದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಆದರೆ ಈ ಹಿಂದೆ ವಾಸುದೇವ ನಾಯಕ್ ಅವರು ನಡೆಸಿದ್ದ ಪತ್ರಿಕಾಗೋಷ್ಠಿಗೆ ಉತ್ತರಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಅವರು ಸಭೆಗೆ ಸಾಕಷ್ಟು ಅರ್ಜಿಗಳು ಬರಬೇಕಾಗಿರುವುದರಿಂದ ಇಲ್ಲಖಾಧಿಕಾರಿಗಳ ಪರಿಶೀಲನೆಗೆ ಸಮಯ ಬೇಕಾಗುತ್ತದೆ ಎಂದಿದ್ದರು. ಇದೀಗ ವಾಸುದೇವ ನಾಯಕ್ ಅವರು ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಸಮಿತಿಯ ಸಭೆ ನಡೆಸುವಂತೆ ಸಮಿತಿಯ ಅಧ್ಯಕ್ಷರು ಹಾಗೂ ತಹಶೀಲ್ದಾರ್ ಅವರಲ್ಲಿ ಒತ್ತಾಯ ಮಾಡಿದ್ದಾರೆ. ಇದೀಗ ಈ ವಿಷಯ ಕಾಂಗ್ರೆಸ್ ಬಿಜೆಪಿ ನಡುವೆ ವಾಗ್ಯುದ್ಧಕ್ಕೆ ಹೊಸ ರೂಪ ನೀಡಿದಂತಾಗಿದೆ. ರೈತ ಕಿಸಾನ್ ಸಂಘ ಕೂಡ ಅಕ್ರಮವಾಗಿ ಸರಕಾರಿ ಜಮೀನಿನಲ್ಲಿ ಕೃಷಿ ನಡೆಸುತ್ತಿರುವ ರೈತರಿಗೆ ಭೂಮಿಯ ಹಕ್ಕನ್ನು ಕಾನೂನು ಬದ್ಧವಾಗಿ ನೀಡುವಂತೆ ಒತ್ತಾಯಿಸಿದೆ.
ಈ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮುಖಂಡ, ಕ್ರೈಸ್ತ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಜಾಯ್ಲಸ್ ಡಿಸೋಜಾ ಅವರು ಅಕ್ರಮ ಸಕ್ರಮ ಸಮಿತಿಗೆ ಸರಕಾರ ನೀಡಿರುವ ಕಾನೂನಿನ ಬಂಧನ ಬಲಿಷ್ಠವಾಗಿರುವುದರಿಂದ ರೈತರಿಗೆ ಭೂಮಿಯನ್ನು ಸಕ್ರಮೀಕರಣ ಮಾಡಲಾಗುತ್ತಿಲ್ಲ ಎಂದಿದ್ದಾರೆ. ಸರಕಾರ ರೈತರಿಗೆ ಅಕ್ರಮ ಜಮೀನನ್ನು ಕೃಷಿಗಾಗಿ ನೀಡಲು ಅರ್ಜಿ ನಂಬ್ರ 53, 50 ಮತ್ತು ಬಗರ್ ಹುಕುಂ 57ರಲ್ಲಿ ಸ್ವೀಕಾರ ಮಾಡಿದೆ. ಈ ನಡುವೆ ನಗರ ಪ್ರದೇಶಗಳಿಂದ ಮೂರು ಕಿಲೋ ಮೀಟರ್ ಗ್ರಾಮಾಂತರ ಪ್ರದೇಶಗಳಿಗೆ ಟವರ್ ಡಿಸ್ಟೆನ್ಸ್ ನವರೆಗೆ ಸಕ್ರಮೀಕರಣ ಅಸಾಧ್ಯ ಎಂಬುದನ್ನು ತಿಳಿಸಿದೆ.
ಈ ಕಾನೂನಿನ ಬಂಧನದಿಂದಾಗಿ ಮೂಡುಬಿದಿರೆ ತಾಲೂಕಿನಲ್ಲಿ ಹೆಚ್ಚಿನ ರೈತರಿಗೆ ಜಾಗ ಕೃಷಿ ಭೂಮಿ ಸಕ್ರಮೀಕರಣ ಸಾಧ್ಯವಿಲ್ಲ ಎಂಬುದು ಬಿಜೆಪಿಗರ ಅಭಿಪ್ರಾಯ. ಗ್ರಾಮಾಂತರ ಪ್ರದೇಶದ ತೀರ ಹಳ್ಳಿಗಳಲ್ಲಿ ಇನ್ನೂ ಕೂಡ ಮೀಸಲು ಅರಣ್ಯದ ಸಮಸ್ಯೆ ಮುಗಿದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಸರಕಾರ ಅಕ್ರಮ ಸಕ್ರಮಕ್ಕೆ ಒಂದೆಡೆ ಕಠಿಣ ಕಾನೂನುಗಳನ್ನು ಜಾರಿಗೊಳಿಸಿದರೆ, ಮತ್ತೊಂದು ಕಡೆ ಕೃಷಿ ಅನುಭವಿಸುವ ರೈತರಿಗೆ ಭೂಮಿ ನೀಡಲು ಸಮಿತಿ ರಚಿಸಿದೆ. ಒಟ್ಟಾರೆಯಾಗಿ ಅಕ್ರಮ ಸಕ್ರಮ ಕೃಷಿ ಭೂಮಿಗಳ ಸಕ್ರಮೀಕರಣ ಯೋಜನೆ, ರೈತರಲ್ಲಿ ಆಶಾಭಾವನೆ ಯೊಂದಿಗೆ ನಿರಾಸೆಯ ಗೂಡನ್ನು ಸೃಷ್ಟಿಸುವಂತಾಗಿದೆ.
