ಕಾರ್ಕಳ

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್ – ಆರೋಪಿಯನ್ನು ಸಮರ್ಥಿಸುತ್ತಿರುವ ಬಿಜೆಪಿ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ

ಕಾರ್ಕಳ: ರಾಜ್ಯ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಬರೆದ ಆರೋಪದ ಮೇಲೆ ಸುಧೀರ್ ಬಂಗೇರ ಎಂಬಾತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿರುವ ಪೊಲೀಸ್ ಇಲಾಖೆಯ ನಿರ್ಧಾರವನ್ನು ದಲಿತ ಮುಖಂಡ ಅಣ್ಣಪ್ಪ ನಕ್ರೆ ಸ್ವಾಗತಿಸಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಆರೋಪಿಯನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿರುವ ಕಾರ್ಕಳ ಬಿಜೆಪಿಯ ನಡೆ ಅತ್ಯಂತ ಆಘಾತಕಾರಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಣ್ಣಪ್ಪ ನಕ್ರೆ, ಸುಧೀರ್ ಬಂಗೇರನ ಕೃತ್ಯಕ್ಕೆ ಬಿಜೆಪಿ ಬೆಂಬಲವಿದೆ ಎಂದು ನೇರ ಆರೋಪ ಮಾಡಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ದಲಿತ ಸಮುದಾಯದ ಹೆಮ್ಮೆಯಾಗಿದ್ದು, ಅವರು ಅಧಿಕಾರ ಸ್ವೀಕರಿಸಿದ ದಿನದಿಂದಲೂ ಮನುವಾದಿ ಮನಸ್ಥಿತಿಯ ಬಿಜೆಪಿ ನಾಯಕರು ಅವರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಅವಹೇಳನ ಮಾಡುತ್ತಿದ್ದಾರೆ. ಈ ವಿಷಬೀಜದ ಪ್ರೇರಣೆಯಿಂದಲೇ ಸುಧೀರ್ ಬಂಗೇರ ದಲಿತ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿದರು.

ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದಾಗ, ಅದನ್ನು ಆತನ ಸಮುದಾಯದ ವಿರುದ್ಧದ ಕ್ರಮ ಎಂದು ಬಿಜೆಪಿ ಬಿಂಬಿಸಲು ಪ್ರಯತ್ನಿಸುತ್ತಿರುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅವಮಾನವಾಗಿದೆ. ಒಬ್ಬ ವ್ಯಕ್ತಿ ಮಾಡಿದ ಅಪರಾಧಕ್ಕೆ ಕಾನೂನು ಕ್ರಮ ಕೈಗೊಂಡರೆ, ಅದನ್ನು ಜಾತಿ ಸಂಘರ್ಷ ಎಂದು ಬಿಂಬಿಸುವ ಮೂಲಕ ಬಿಜೆಪಿ ದಲಿತ ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಸೌಹಾರ್ದತೆ ಕಾಯ್ದುಕೊಳ್ಳುವ ಬದಲಾಗಿ, ದಲಿತ ನಿಂದನೆ ಮಾಡಿದ ವ್ಯಕ್ತಿಯನ್ನು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಮತ್ತು ಕಾರ್ಕಳ ಮಂಡಲ ಅಧ್ಯಕ್ಷ ನವೀನ್ ನಾಯಕ್ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಬೆಂಬಲಿಸಿರುವುದು ಅವರ ದಲಿತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಂಜಲು ತಿನ್ನುವವರು ಎಂದು ಹೀಯಾಳಿಸಿ, ಜೀವ ಬೆದರಿಕೆ ಹಾಕಿದ ಆರೋಪಿಯನ್ನು ಖಂಡಿಸುವ ಬದಲು ಸಮರ್ಥನೆ ಮಾಡಿಕೊಳ್ಳುತ್ತಿರುವ ಬಿಜೆಪಿ ನಾಯಕರು, ದಲಿತರ ಮತಗಳು ತಮಗೆ ಬೇಕೆ ಅಥವಾ ಬೇಡವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು. ದಲಿತರು ತಮಗೆ ಆದ ಅನ್ಯಾಯದ ವಿರುದ್ಧ ದೂರು ನೀಡಿದರೆ ಅದು ತಪ್ಪೇ? ನಮಗೆ ನ್ಯಾಯ ಕೇಳುವ ಹಕ್ಕು ಇಲ್ಲವೇ? ಎಂದು ಪ್ರಶ್ನಿಸಿದ ಅವರು, ದಲಿತ ಸಮುದಾಯವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಕೃತ್ಯವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಸಮುದಾಯಗಳು ತಮ್ಮ ಯುವಕರು ಕಾನೂನನ್ನು ಕೈಗೆತ್ತಿಕೊಳ್ಳದಂತೆ ಜಾಗೃತಿ ಮೂಡಿಸಬೇಕೇ ಹೊರತು, ರಾಜಕೀಯ ಪಕ್ಷಗಳ ಕೈಗೊಂಬೆಯಾಗಬಾರದು ಎಂದು ಕಿವಿಮಾತು ಹೇಳಿದರು.

ಈ ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ರಾಘವ ಕುಕ್ಕುಜೆ, ಪ್ರತಿಮಾ ರಾಣೆ, ಶ್ರೀಧರ ಬೈಲೂರು, ದೇವಾದಾಸ್ ದುರ್ಗಾ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

 

Related posts

ಮುದ್ರಾಡಿಯ ಶಶಿಕಲಾ ಡಿ.ಪೂಜಾರಿ ಅವರಿಗೆ ಸೇವಾ ರತ್ನ ಪ್ರಶಸ್ತಿ

Madhyama Bimba

ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ – ಪ್ರತಿಭಾ ಪುರಸ್ಕಾರ

Madhyama Bimba

ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆ: ವಾರ್ಷಿಕ ಮಹಾರಥೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More