ಕಾರ್ಕಳ ತಾಲೂಕಿನ 5 ಗ್ರಾಮ ಪಂಚಾಯಿತಿಗಳಿಗೆ ಉಪ ಚುನಾವಣೆ
ವರದಿ. ಹರೀಶ್ ಆಚಾರ್ಯ, ಬೈಲೂರು
ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಹಾಗೂ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ಚುನಾವಣಾ ವೇಳಾ ಪಟ್ಟಿಯನ್ನು ಘೋಷಿಸಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದು, ನಲ್ಲೂರು, ನಿಟ್ಟೆ, ನೀರೆ, ಕೆರ್ವಾಶೆ ಗ್ರಾಮ ಪಂಚಾಯಿತಿಗಳಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ನ.23 ರಂದು ನಡೆಯಲಿದೆ.
ಈದು, ನಲ್ಲೂರು, ನಿಟ್ಟೆ, ಕೆರ್ವಾಶೆ ಗ್ರಾಮ ಪಂಚಾಯತ್‌ನಲ್ಲಿ ಒಂದೊಂದು ಸ್ಥಾನಗಳಿಗೆ ಮತದಾನ ನಡೆದರೇ, ನೀರೆ ಗ್ರಾಮ ಪಂಚಾಯತ್‌ನಲ್ಲಿ 3 ಸ್ಥಾನಗಳಿಗೆ ಮತದಾನ ನಡೆಯಲಿದೆ.
ನ. 7ರಂದು ಜಿಲ್ಲಾಧಿಕಾರಿಯವರು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು, ನ. 12 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನ. 13 ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನ. 15 ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕವಾಗಿದೆ.
ಮತದಾನ ಅವಶ್ಯವಿದ್ದರೆ ನ. 23ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಮರು ಮತದಾನ ಅವಶ್ಯವಿದ್ದರೆ ನ. 25ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ನ.26 ರಂದು ತಾಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.
ನ. 9ರಂದು ಎರಡನೇ ಶನಿವಾರ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಕಾಯ್ದೆಯಡಿಯಲ್ಲಿ ಘೋಷಿಸಲ್ಪಟ್ಟ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಆ ದಿನದಂದು ಯಾವುದೇ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಸ್ವೀಕರಿಸುವುದಿಲ್ಲ
ನ.7ರಿಂದ ನ.26ರ ವರೆಗೆ ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ