ಪಣಜಿ: ಗೋವಾದ ತುಳುವರನ್ನು ಸಂಘಟಿಸಿ ಗಣೇಶ್ ಕೆ. ಶೆಟ್ಟಿ ಇರ್ವತ್ತೂರು ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟಿರುವ ತುಳುಕೂಟ ಗೋವಾ ಘಟಕ ಅದ್ದೂರಿ ಕಾರ್ಯಕ್ರಮದೊಂದಿಗೆ ಲೋಕಾರ್ಪಣೆಗೊಂಡಿದೆ.
ತುಳುನಾಡಿನಿಂದ ಬಂದಿದ್ದ ಗಣ್ಯರು ಹಾಗೂ ಗೋವಾದ ಪ್ರಮುಖರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ತುಳುಕೂಟ ಗೋವಾದ ಅಧ್ಯಕ್ಷ ಗಣೇಶ್ ಕೆ. ಶೆಟ್ಟಿ ಇರ್ವತ್ತೂರು ಗೋವಾದಲ್ಲಿ ತುಳುಕೂಟ ಆರಂಭಿಸಲು ಕಾರಣವಾದ ಅಂಶಗಳನ್ನು ವಿವರಿಸಿದರು. ಮುಂಬೈ ಮತ್ತು ಬೆಂಗಳೂರಿನಲ್ಲಿ ತುಳುವರು ತುಳುವರ ಸಂಘಗಳನ್ನು ಕಟ್ಟಿಕೊಂಡು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಅವರು ತುಳುನಾಡಿನಲ್ಲೇ ಇರುವಂತಹ ಅನುಭವ ಪಡೆದಿದ್ದಾರೆ. ಅದೇ ರೀತಿ ಗೋವಾದಲ್ಲೂ ತುಂಬಾ ಜನ ತುಳುವರಿದ್ದಾರೆ. ಅವರನ್ನು ಸಂಘಟಿಸುವ ಅವಕಾಶವಿರಲಿಲ್ಲ. ಯಾರಾದರೂ ತುಳುವಿನಲ್ಲಿ ಮಾತನಾಡುವುದನ್ನು ಕೇಳಿದರೆ, ಯಾವ ಊರು? ಎಂದು ಕೇಳುವಷ್ಟು ಮಾತುಕತೆ ಮಾತ್ರ ನಡೆಯುತ್ತಿತ್ತು. ಅದಕ್ಕಿಂತ ಮುಂದೆ ಹೋಗುತ್ತಿರಲಿಲ್ಲ. ಹೀಗಾಗಿ ತುಳುವರನ್ನು ಸಂಘಟಿಸಲು ಹಲವರ ಬೆಂಬಲ ಪಡೆದು ಎರಡು ತಿಂಗಳಿನ ಕೂಸು ಈ ಸಂಘಟನೆಯನ್ನು ಕಟ್ಟಲಾಗಿದೆ ಎಂದು ಗಣೇಶ್ ಶೆಟ್ಟಿ ಇರ್ವತ್ತೂರು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಐಸಿರದ ಮದಿಪು ಮಂಡನೆ ಮಾಡಿದ ದಿನೇಶ್ ರೈ, ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಕೆ ಗುಣಪಾಲ ಕಡಂಬ, ನಾಟಕ, ಸಿನೆಮಾ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ, ತುಳುಕೂಟ ಬೆದ್ರ ಅಧ್ಯಕ್ಷ ಧನಕೀರ್ತಿ ಬಲಿಪ, ನಟ ಪ್ರಸನ್ನ ಶೆಟ್ಟಿ ಬೈಲೂರು, ತುಳುಕೂಟ ಗೋವಾದ ಗೌರವಾಧ್ಯಕ್ಷ ಸದಾನಂದ ಶೆಟ್ಟಿ ಬೆಳ್ವಾಯಿ, ತುಳುಕೂಟ ಗೋವಾದ ಗೌರವಾಧ್ಯಕ್ಷ ಚಂದ್ರಹಾಸ ಅಮೀನ್, ವಿಜಯೇಂದ್ರ ಶೆಟ್ಟಿ, ತುಳುಕೂಟ ಗೋವಾದ ಕಾರ್ಯದರ್ಶಿ ಶಶಿಧರ ನಾಯ್ಕ್, ಖಜಾಂಚಿ ಪ್ರಶಾಂತ್ ಜೈನ್, ಸಂಯೋಜಕ ಅಶೋಕ್ ಶೆಟ್ಟಿ ಮುಡಾರು ಮತ್ತಿತರರು ಉಪಸ್ಥಿತರಿದ್ದರು.
ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಿವಧೂತೆ ಗುಳಿಗೆ ನಾಟಕ ಪ್ರದರ್ಶನವಾಯಿತು. ಅಲ್ಲದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತುಳು ಸಂಸ್ಕೃತಿಗೆ ಸಂಬಂಧಿಸಿದ ವಸ್ತು ಪ್ರದರ್ಶನವೂ ನಡೆಯಿತು.