ಕಾರ್ಕಳ : ತಮಿಳುನಾಡು ಚೆನ್ನೈನ ಮುದ್ರಾ ಸಂಗೀತ ಸಂಸ್ಥೆ ಸಂಗೀತಕ್ಕಾಗಿ ಯುವ ಕಲಾವಿದರಿಗೆ ಕೊಡಮಾಡುವ ಪ್ರತಿಷ್ಠಿತ ಮೂವತ್ತನೆಯ ‘ಸಂಗೀತ ಮುದ್ರಾ’ ಪ್ರಶಸ್ತಿ ಈ ಬಾರಿ ಉಡುಪಿ ಜಿಲ್ಲೆಯ ಕಾರ್ಕಳದ ಕರ್ನಾಟಕ ಸಂಗೀತದ ಯುವ ಕಲಾವಿದೆ ವಿದುಷಿ ಆತ್ರೇಯೀ ಕೃಷ್ಣಾ ಕೆ ಇವರಿಗೆ ಸಂದಿದೆ.
‘ಮುದ್ರಾ’ ಸಂಗೀತ ಸಂಸ್ಥೆ ಕರ್ನಾಟಕ ಸಂಗೀತದಲ್ಲಿ ಯುವ ಕಲಾವಿದರನ್ನು ಪೋಷಿಸುವ ಹಾಗೂ ಗುರುತಿಸಿ ಗೌರವಿಸುವ ಸಲುವಾಗಿ ಪ್ರತಿವರುಷ ಸಂಗೀತ ಕಚೇರಿಗಳನ್ನು ಆಯೋಜಿಸಿ, ಹಾಡುಗಾರ ಅಥವಾ ಮುಖ್ಯ ವಾದ್ಯವಾದಕರು ಹಾಗೂ ಪಕ್ಕವಾದ್ಯದ ಇಬ್ಬರಿಗೆ ಕೊಡಮಾಡುವ ಈ ಪ್ರಶಸ್ತಿಗಳನ್ನು ಹಿರಿಯ ಸಂಗೀತವಿದ್ವಾಂಸರನ್ನೊಳಗೊಂಡ ತೀರ್ಪುಗಾರ ಮಂಡಳಿ ಆಯ್ಕೆಮಾಡಿ ‘ಸಂಗೀತ ಮುದ್ರಾ’ ಪ್ರಶಸ್ತಿಯನ್ನು ಕಳೆದ ಇಪ್ಪತ್ತೊಂಬತ್ತು ವರ್ಷಗಳಿಂದ ಯುವಕಲಾವಿದರಿಗೆ ಪ್ರೇರಣಾದಾಯಕವಾಗಿ ನೀಡುತ್ತಿದೆ.
ಕಾರ್ಕಳದ ಡಾ. ಅರುಣಕುಮಾರ್ ಎಸ್.ಆರ್ ಹಾಗೂ ಪೂರ್ಣಿಮಾ ದಂಪತಿಯ ಸುಪುತ್ರಿ ವಿದುಷಿ ಆತ್ರೇಯೀ ಕೃಷ್ಣಾ ಪರ್ಕಳದ ಸರಿಗಮಭಾರತಿಯ ವಿದುಷಿ ಉಮಾಶಂಕರಿ, ಬಂಟ್ವಾಳದ ಶ್ರೀ ಕೃಷ್ಣಗಾನಸುಧಾದ ವಿದ್ವಾನ್ ಯತಿರಾಜ ಆಚಾರ್ಯ ಹಾಗೂ ಪ್ರಕೃತ ಚೆನ್ನೈನ ವಿದ್ವಾನ್ ಆರ್.ಕೆ. ಶ್ರೀರಾಮ್ ಕುಮಾರ್ ಮತ್ತು ವಿದುಷಿ ಅಮೃತಾ ಮುರಳಿಯವರಲ್ಲಿ ಹೆಚ್ಚಿನ ಸಂಗೀತ ಅಭ್ಯಾಸವನ್ನು ಮಾಡುತ್ತಿದ್ದಾರೆ.
ಭಾರತದ ಹಲವು ಸಂಗೀತ ಸಭಾಗಳಲ್ಲಿ ಕಚೇರಿಗಳನ್ನು ನೀಡಿದ್ದು, ಕರ್ನಾಟಕ ಸರಕಾರದ ಕಲಾಶ್ರೀ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿಯ ಶಿಷ್ಯವೇತನ, ಕೇಂದ್ರ ಸರಕಾರದ ಸಿಸಿಆರ್‌ಟಿ ಶಿಷ್ಯವೇತನ, ಚೆನ್ನೈನ ಮಣಿಕೃಷ್ಣಸ್ವಾಮಿ ಅಕಾಡೆಮಿಯ ಯುವ ಸಂಗೀತ ಪುರಸ್ಕಾರ, ಮಂಗಳೂರಿನ ಸಂಗೀತ ಪರಿಷತ್ತಿನ ಆರ್. ಸುಲೋಚನಾ ಬಲ್ಲಾಳ್ ಯುವ ಪ್ರತಿಭಾ ಪ್ರಶಸ್ತಿ, ಉಡುಪಿಯ ರಾಗಧನ ಸಂಸ್ಥೆಯ ‘ರಾಗಧನಪಲ್ಲವಿ’ ಪ್ರಶಸ್ತಿ, ಶ್ರೀ ರಾಮಚಂದ್ರಾಪುರ ಮಠದಿಂದ ಛಾತ್ರ ಸಮ್ಮಾನ ಮಾತ್ರವಲ್ಲದೆ ಕಾಂತಾವರ ಕನ್ನಡ ಸಂಘ ಮೊದಲಾದ ಹಲವು ಸಂಘಸಂಸ್ಥೆಗಳಿಂದ ಗೌರವ ಪುರಸ್ಕಾರಗಳನ್ನು ಪಡೆದ ಪ್ರತಿಭಾನ್ವಿತೆ.