ಜಿಲ್ಲೆಗೆ ವಿವಿಧ ರಾಜ್ಯಗಳಿಂದ, ಜಿಲ್ಲೆಗಳಿಂದ ಪ್ರವಾಸಿಗರು ಹಾಗೂ ಶಾಲಾ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆಂದು ಆಗಮಿಸುತ್ತಿರುತ್ತಾರೆ. ಬರುವಂತ ಪ್ರವಾಸಿಗರು ಹಾಗೂ ಶಾಲಾ ಮಕ್ಕಳು ಸಮುದ್ರ ತೀರದಲ್ಲಿ ಬಂದು ನೀರಿಗೆ ಇಳಿದು ನೀರಿನಲ್ಲಿ ಆಟ ಆಡುವುದು, ಸ್ನಾನ ಮಾಡುವುದು ಸರ್ವೆ ಸಾಮಾನ್ಯವಾಗಿರುತ್ತದೆ. ಆದರೆ ಬರುವಂತ ಪ್ರವಾಸಿಗರಿಗೆ ನೀರಿನ ಅಬ್ಬರದ ಬಗ್ಗೆ ತಿಳುವಳಿಕೆ ಇಲ್ಲದೇ ಇದ್ದು ನೀರಿಗೆ ಈಜಲು ಹೋಗಿ ಪ್ರಾಣಾಪಾಯ ತಂದುಕೊಳ್ಳುತ್ತಾರೆ.
ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ನದಿ, ಜಲಪಾತಗಳು ಹಾಗೂ ಸಮುದ್ರದ ಅಲೆಗಳು ತುಂಬಾ ಅಪಾಯಕಾರಿಯಾಗಿರುವುದರಿಂದ ಸದರಿ ಸ್ಥಳಗಳಲ್ಲಿ ಪಾಲಕರು ತಮ್ಮ ಮಕ್ಕಳು ನೀರಿಗೆ ಇಳಿಯದಂತೆ ಹಾಗೂ ಶೈಕ್ಷಣಿಕ ಪ್ರವಾಸಕ್ಕೆ ಬರುವ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಆಗಮಿಸುವ ಶಿಕ್ಷಕರು / ಉಪನ್ಯಾಸಕರು ಹಾಗೂ ಮುಖ್ಯೋಪಾದ್ಯಾಯರು ತಮ್ಮ ಶಾಲಾ-ಕಾಲೇಜು ಮಕ್ಕಳಿಗೆ ಸೂಕ್ತ ತಿಳುವಳಿಕೆಯನ್ನು ನೀಡಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿ, ನೀರಿಗೆ ಇಳಿಯದಂತೆ ನೋಡಿಕೊಳ್ಳಬೇಕು.
ಪ್ರವಾಸದ ಸಂಧರ್ಭದಲ್ಲಿ ಮಕ್ಕಳನ್ನು ಯಾವುದೇ ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು ಹಾಗೂ ಎಲ್ಲಾ ಸ್ಥಳಗಳಲ್ಲಿ ಪ್ರವಾಸಿ ಉಸ್ತುವಾರಿ ವಹಿಸಿದ ಸಿಬ್ಬಂದಿಯವರು ವಿದ್ಯಾರ್ಥಿಗಳ ಜೊತೆ ಇದ್ದು ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ಅವಘಡಕ್ಕೆ / ಹಾನಿಗೆ ಶಾಲಾ ಮುಖ್ಯಸ್ಥರು ಮತ್ತು ಪ್ರವಾಸದ ಉಸ್ತುವಾರಿ ವಹಿಸಿದ ಸಿಬ್ಬಂದಿಯವರೇ ಜವಾಬ್ದಾರರಾಗಿರುತ್ತಾರೆ.
ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಿದ ಬೀಚುಗಳಲ್ಲಿ BATHING ZONE ವ್ಯಾಪ್ತಿಯಲ್ಲಿ ಮಾತ್ರ ನೀರಿಗೆ ಇಳಿಯಬೇಕು. ಪ್ರವಾಸಿಗರ ಹಿತದೃಷ್ಟಿಯಿಂದ ಪ್ರಕ್ಷಣೀಯ ಸ್ಥಳಗಳಲ್ಲಿ ನಿಯೋಜಿಸಿದ ಪೊಲೀಸ್, ಲೈಫ್ ಗಾರ್ಡ್, ಪ್ರವಾಸಿಮಿತ್ರ ಹಾಗೂ ಭದ್ರತಾ ಸಿಬ್ಬಂದಿಗಳೂ ನೀಡುವ ಎಚ್ಚರಿಕೆಯ ಸೂಚನೆಯನ್ನು ಪಾಲಿಸುವುದರ ಮೂಲಕ ಪ್ರವಾಸಿ ತಾಣಗಳನ್ನು ದೂರದಿಂದಲೇ ವೀಕ್ಷಿಸಿ ಸಂಭ್ರಮಿಸಿ ಅಲ್ಲಿಂದ ಸುರಕ್ಷಿತವಾಗಿ ತೆರಳುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.