ಸ್ಪರ್ಶ ಅಸ್ಪರ್ಶ, ಮೇಲು ಕೀಳು ಮುಂತಾದ ಜಾತಿ ಅಸಮಾನತೆಯ ವಿರುದ್ದ ಹೋರಾಡಿ ಈ ದೇಶಕ್ಕೆ ಸಮಾನತೆಯನ್ನು ಸಾರುವ ಸುಸ್ಥಿರವಾದ ಪವಿತ್ರ ಸಂವಿಧಾನವನ್ನು ನೀಡಿ ಕೋಟ್ಯಾಂತರ ಜನರ ಬಾಳಿಗೆ ಬೆಳಕಾದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯೊಳಗಡೆಯೇ ಅವಹೇಳನ ಮಾಡಿರುವುದು ಶೋಷಿತ ಸಮುದಾಯಗಳ ಮೇಲಿನ ದಾಳಿಯಾಗಿದೆ, ಅಮಿತ್ ಶಾ ಅವರ ಈ ಮಾತುಗಳನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅತ್ಯುಗ್ರ ಪದಗಳಿಂದ ಖಂಡಿಸುತ್ತದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ತಿಳಿಸಿದ್ದಾರೆ.
ಮನುಸ್ಮೃತಿಯ ಆರಾಧಕರಾಗಿರುವ ಬಿಜೆಪಿ ಹಾಗೂ ಅದರ ಅಂಗ ಸಂಘಟನೆಗಳು ದೇಶದ ಸಂವಿಧಾನದ ಮೇಲೆ ಯಾವುದೇ ನಂಬಿಕೆಯನ್ನು ಹೊಂದಿಲ್ಲವೆಂದು ಅವರು ಪದೇ ಪದೇ ನೀಡುವ ಸಂವಿಧಾನ ವಿರೋದಿ ಹೇಳಿಕೆಗಳೇ ಸಾಕ್ಷಿಯಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಬಿಜೆಪಿಯ ಪರಿವಾರಗಳು ರಾಷ್ಟ್ರ ನಾಯಕರಾದ ಗಾಂಧಿ, ನೆಹರು, ಅಂಬೇಡ್ಕರ್ ಅವರ ವಿರುದ್ದ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಅವರನ್ನು ನಿರಂತರವಾಗಿ ಅವಹೇಳನ ಮಾಡುತ್ತಾ ಬಂದಿದೆ. ದೇಶದ ಜನರಿಗೆ ರಾಷ್ಟ್ರ ನಾಯಕರ ಬಗ್ಗೆ ಅಪನಂಬಿಕೆ ಬರುವಂತೆ ಕಟ್ಟು ಕಥೆಗಳನ್ನು ಕಟ್ಟುವ ಬಿಜೆಪಿಗೆ ಸಂವಿಧಾನಬದ್ದವಾಗಿ ಆಡಳಿತ ನಡೆಸುವ ಯಾವ ನೈತಿಕತೆಯೂ ಇಲ್ಲವಾಗಿದೆ.
ಕೇಂದ್ರದಲ್ಲಿ ಸ್ವತಃ ಗೃಹ ಸಚಿವರೇ ಲೋಕಸಭೆಯೊಳಗಡೆ ಅಂಬೇಡ್ಕರ್ ಅವಹೇಳನ ಮಾಡಿರುವುದರಿಂದ ಪ್ರೇರಿತರಾದ ರಾಜ್ಯ ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರು ಸದನದೊಳಗಡೆಯೇ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾರೆ.
“ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ” ಎನ್ನುವ ಗಾದೆಯಂತೆ ಕೇಂದ್ರ ಬಿಜೆಪಿ ನಾಯಕರ ಸಂವಿಧಾನ ವಿರೋದಿ ಹೇಳಿಕೆಗಳಿಂದ ಪ್ರೇರಿತಾರದ ರಾಜ್ಯ ಬಿಜೆಪಿ ನಾಯಕ ಸಿ.ಟಿ.ರವಿ ಮಹಿಳೆಯರನ್ನು ಅವಹೇಳನಗೈಯುತ್ತಿದ್ದಾರೆ. ಭೇಠಿ ಬಚಾವ್ ಭೇಟಿ ಪಡಾವೋ ಎಂದು ಭಾಷಣದಲ್ಲಿ ಹೇಳುವ ಪ್ರಧಾನಿ ಮೋದಿಯವರು ಮಹಿಳಾ ವಿರೋದಿ ರಾಜ್ಯ ಬಿಜೆಪಿ ನಾಯಕರ ವರ್ತನೆಗೆ ಮೌನ ಸಮ್ಮತಿ ನೀಡಿದ್ದಾರೆಯೆ..?
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಂದಿಸಿದ ನೋವಿನ ಜೊತೆಗೆ ಮಹಿಳಾ ವಿರೋದಿ ಸಿ.ಟಿ.ರವಿಯವರ ದುಷ್ಕೃತ್ಯವನ್ನು ಬೆಂಬಲಿಸುವ ಬಿಜೆಪಿ ಕಾರ್ಯಕರ್ತರ ಮನಸ್ಥಿತಿಯಿಂದ ಅತೀವ ನೋವಾಗಿದೆ.
ಮಹಿಳೆಯರನ್ನು ದೇವಿ, ತಾಯಿ ಎಂದು ಪೂಜಿಸುವ ಮಾತುಗಳನ್ನು ಹೇಳುವ ಬಿಜೆಪಿಯ ಹಿಂಬಾಲಕರು ಮಹಿಳೆಯರನ್ನು ಅವಹೇಳನಗೈದ ಸಿ.ಟಿ. ರವಿಯನ್ನು ಬೆಂಬಲಿಸುತ್ತಿರುವುದು ನೋಡುವಾಗ ಇವರು “ಮಾಡುವುದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ” ಎಂದಂತಾಗಿದೆ.
ಸದನದೊಳಗೆ ಸಂವಿಧಾನಿಕ ಪದಗಳನ್ನಾಡಿದ ಸಿ.ಟಿ.ರವಿ ವಿರುದ್ದ ಕ್ರಮ ಕೈಗೊಂಡ ರಾಜ್ಯ ಸರ್ಕಾರದ ಕಾರ್ಯ ಶ್ಲಾಘನೀಯ, ಅದೇ ರೀತಿ ಸಿ.ಟಿ. ರವಿ ಅವಹೇಳನಕಾರಿ ಮಾತುಗಳನ್ನು ಬೆಂಬಲಿಸಿ ಮಹಿಳೆಯರನ್ನು ನಿಂಧಿಸುತ್ತಿರುವ ಅವರ ಹಿಂಬಾಲಕರ ವಿರುದ್ದವೂ ಕಠಿಣ ಕ್ರಮವಾಗಬೇಕಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
previous post