ವರಂಗ: ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಸಹಭಾಗಿಯಾಗಿರುವ ಗೋವನ್ನು ತಾಯಿಯಾಗಿ, ದೇವರಾಗಿ ಪೂಜಿಸುವ ಪರಂಪರೆ ನಮ್ಮದು. ಅಮೃತಸದೃಶವಾದ ಹಾಲನ್ನು ನೀಡುವ ಕಾಮಧೇನು ನಮ್ಮ ಗೋವುಗಳು. ಗೋವುಗಳು ಪ್ರಕೃತಿಯ ಪೋಷಕ ಹಾಗೂ ಭೂಮಿಯ ರಕ್ಷಕ. ಕಸದಿಂದ ರಸ ಉತ್ಪಾದಿಸುವ ಮಹಾಜೀವಿ. ಗೋವಿನ ಎಲ್ಲ ಉತ್ಪನ್ನಗಳು ನಮ್ಮ ಆರೋಗ್ಯವೃದ್ಧಿಗೆ ಪೂರಕ. ಗೋಗ್ರಾಸ ನೀಡುವುದರಿಂದ ಸಮಸ್ತ ದೇವತೆಗಳು ಪ್ರಸನ್ನರಾಗುತ್ತಾರೆ. ಮುಕ್ಕೋಟಿ ದೇವತೆಗಳ ವಾಸಸ್ಥಾನವಾಗಿರುವ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗೋವುಗಳ ಪಾಲನೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಒಳ್ಳೆಯ ಕಾರ್ಯ. ನಿಮ್ಮಿಂದ ಇನ್ನಷ್ಟು ಸಂಘಟನೆಗಳಿಗೆ ಗೋಶಾಲೆಗಳಿಗೆ ಗೋಗ್ರಾಸ ನೀಡುವ ಪ್ರೇರಣೆ ನೀಡಿದಂತಾಗಿದೆ. ಅಡ್ಕ ಭಜನಾ ಮಂಡಳಿಯ ಎಲ್ಲರಿಗೂ ಇನ್ನಷ್ಟು ಸಮಾಜಸೇವೆ ಮಾಡುವ ಶಕ್ತಿಯನ್ನು ಭಗವಂತನು ಅನುಗ್ರಹಿಸಲಿ ಎಂದು ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.
ಅವರು ವರಂಗ ಗ್ರಾಮದ ಅಡ್ಕ ಶ್ರೀ ಚತುರ್ಮುಖ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಹಾಗೂ ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ವತಿಯಿಂದ ಹೆಬ್ರಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಗೆ ನೀಡಿದ “ಗೋವಿಗಾಗಿ ಮೇವು” ಗೋಗ್ರಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಡ್ಕ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಜಯಕರ ಕುಲಾಲ್, ಭಜನಾ ಮಂಡಳಿ ಅಧ್ಯಕ್ಷರಾದ ಸುಧೀರ್ ಕುಲಾಲ್, ಮಹಿಳಾ ಭಜನಾ ಮಂಡಳಿ ಅಧ್ಯಕ್ಷರಾದ ಸುಂದರಿ ಕುಲಾಲ್, ಸುರೇಂದ್ರ ಕುಲಾಲ್, ಕಿರಣ್ ಕುಲಾಲ್, ವರಂಗ ಪಂಚಾಯತ್ ಸದಸ್ಯರಾದ ನೀಲಾವತಿ ಶೇರಿಗಾರ್, ಜೀರ್ಣೋದ್ದಾರ ಸಮಿತಿ ಮತ್ತು ಭಜನಾ ಮಂಡಳಿಯ ಸರ್ವಸದಸ್ಯರು ಉಪಸ್ಥಿತರಿದ್ದರು.ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಗೋಶಾಲೆಯ ಟ್ರಸ್ಟಿಗಳಾದ ಎಂ. ರವಿ ರಾವ್ ಸ್ವಾಗತಿಸಿ, ವಂದಿಸಿದರು.ಗೋಶಾಲೆಯ ಉಸ್ತುವಾರಿ ಸುಬ್ರಮಣ್ಯ ನಾಯಕ್ ಸಹಕರಿಸಿದರು.