ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾರ್ಕಳದಿಂದ ಮಂಗಳೂರುವರೆಗೆ ನಡೆಸುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಯನ್ನು ಕಾನೂನು ರೀತಿಯಲ್ಲಿ ನಡೆಸದೆ ಕಿರುಕುಳ ನೀಡುತ್ತಿರುವುದಾಗಿ ಮೂಡುಬಿದಿರೆ ಅಲಂಗಾರು ಉಳಿಯದ ಭದ್ರ ಸಾ ಮಿಲ್‌ನ ಆಡಳಿತದಾರರು ಅಬ್ದುಲ್ ಖಾದರ್, ಮಹಮ್ಮದ್ ಹನೀಫ್ ಹಾಗೂ ಸ್ಥಳೀಯರಾದ ವಿಶ್ವಮೂರ್ತಿ ಆಚಾರ್ಯ ಆರೋಪಿಸಿದ್ದಾರೆ.ಮೂಡುಬಿದಿರೆ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನವಾಗಿರುವ ಸರ್ವೇ ನಂಬ್ರ ೨೦೪, ೨೦೬, ೨೦೭, ೨೪೦/೨ಎ ಜಮೀನುಗಳನ್ನು ಬಳಸಿಕೊಳ್ಳದೆ ಹೆದ್ದಾರಿ ವ್ಯಾಪ್ತಿಗೆ ಬರದ ಭದ್ರ ಸಾ ಮಿಲ್ ಹಾಗೂ ಸ್ಥಳೀಯ ಓರ್ವರ ಮನೆಯ ಜಾಗವನ್ನು ಅತಿಕ್ರಮಿಸಲು ಹುನ್ನಾರ ನಡೆಸುತ್ತಿರುವ ಬಗ್ಗೆ ದೂರಿದರು.ಈ ಬಗ್ಗೆ ನಾವು ಕಾನೂನು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಆತಂಕ ವ್ಯಕ್ತ ಪಡಿಸಿದರು. ಅಧಿಕಾರಿಗಳು ಈ ಮೂಲಕ ಕಮಿಷನ್ ದಂಧೆ ನಡೆಸುವ ಬಗ್ಗೆಯೂ ಗುಮಾನಿ ವ್ಯಕ್ತ ಪಡಿಸಿದರು.