ನಮ್ಮ ಮಾತುಗಳು ಹೃದಯದಿಂದ ಬಂದರೆ ಮಾತ್ರವೇ ಕೇಳುಗರ ಮನಸ್ಸಿಗೆ ತಲುಪಬಹುದು. ಶಬ್ದಗಳಿಗಿಂತ ಭಾವನೆ ಮುಖ್ಯ. ಪ್ರಾಮಾಣಿಕತೆ, ಆತ್ಮೀಯತೆಯ ಮಾತುಗಳು ಹೃದಯ ಸ್ಪರ್ಶಿಸುತ್ತವೆ. ಯಶಸ್ಸನ್ನು ಹಂಚಿಕೊಳ್ಳಬೇಕು, ಆದರೆ ತಪ್ಪನ್ನು ಒಪ್ಪಿಕೊಳ್ಳುವ ಹೃದಯ ಇರಬೇಕು. ನಿಜವಾದ ನಾಯಕನು ತನ್ನ ಪ್ರತಿಯೊಂದು ಕಾರ್ಯದಲ್ಲಿ ಪ್ರಾಮಾಣಿಕತೆಯನ್ನು ತೋರಿಸುತ್ತಾನೆ ಮತ್ತು ಜನರಿಗೆ ಪ್ರೇರಣೆಯಾಗುತ್ತಾನೆ. ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ತಿಳಿಸಿದರು.
ಅವರು ಯುವವಾಹಿನಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಘಟಕದ ಸದಸ್ಯರಿಗಾಗಿ ನಡೆದ ಹೊಂಬೆಳಕು 2025 ವ್ಯಕ್ತಿತ್ವ ವಿಕಸನ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಬಿರ ನಡೆಸಿಕೊಟ್ಟರು.
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಮುರಳೀಧರ ಕೋಟ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವ ಉದ್ಯಮಿ ಭಾಸ್ಕರ್ ಕೋಟ್ಯಾನ್ ದೀಪ ಬೆಳಗುವುದರ ಮೂಲಕ ಕಾರ್ಯಾಗಾರ ಉದ್ಘಾಟಿಸಿದರು.
ಇರುವೈಲು ಬಿಲ್ಲವ ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವವಾಹಿನಿ ಮೂಡುಬಿದಿರೆ ಘಟಕದ ನಿಕಟಪೂರ್ವ ಅಧ್ಯಕ್ಷ ಶಂಕರ್ ಎ ಕೋಟ್ಯಾನ್ , ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಡಾ.ಶುಭಕರ್ ಅಂಚನ್, ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿ ಕೆ, ನವಾನಂದ, ಉಪಾಧ್ಯಕ್ಷರಾದ ಗಿರೀಶ್ ಕೋಟ್ಯಾನ್, ಮಾಜಿ ಕೋಶಾಧಿಕಾರಿ ಶೋಭಾ ಸುರೇಶ್ ಇವರುಗಳು ಕಾರ್ಯಕ್ರಮದ ಬಗ್ಗೆ ತಮ್ಮ ತಮ್ಮ ಅನಿಸಿಕೆ ಯನ್ನು ವ್ಯಕ್ತಪಡಿಸಿದರು.
ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕ ಸುಶಾಂತ್ ಕರ್ಕೇರಾ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿನೀತ್ ಸುವರ್ಣ ಧನ್ಯವಾದ ನೀಡಿದರು.