ಕಾರ್ಕಳಹೆಬ್ರಿ

‘ಹೀಟ್ ವೇವ್ (ಶಾಖದ ಹೊಡೆತ)ಯಿಂದ ಸಾರ್ವಜನಿಕರು ರಕ್ಷಿಸಿಕೊಳ್ಳಲು ಸಲಹೆ-ಸೂಚನೆಗಳು

ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನಲೆ, ಹೀಟ್ ವೇವ್ (ಶಾಖದ ಹೊಡೆತ) ಸ್ಟ್ರೋಕ್‌ನಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹವಾಮಾನ ಇಲಾಖೆ ಈ ಕೆಳಕಂಡಂತೆ ಸಲಹೆ-ಸೂಚನೆಗಳನ್ನು ನೀಡಿದೆ.


ಸಾರ್ವಜನಿಕರು ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ಹಾಗೂ ಹೊರಗೆ ಕೆಲಸ ಮಾಡುವುದನ್ನು ತಪ್ಪಿಸಬೇಕು. ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಬೇಕು. ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ/ಟೋಪಿ, ಬೂಟುಗಳು ಅಥವಾ ಚಪ್ಪಲ್‌ಗಳನ್ನು ಬಳಸಬೇಕು.


ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ಆದಷ್ಟು ತಪ್ಪಿಸಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ಬಳಸಬಾರದು. ಹೆಚ್ಚಿನ ಪ್ರೋಟೀನ್ ಆಹಾರವನ್ನು ತಪ್ಪಿಸಿ ಮತ್ತು ಹಳೆಯ ಆಹಾರವನ್ನು ಸೇವಿಸಬಾರದು. ಹೊರಗೆ ಕೆಲಸ ಮಾಡುತ್ತಿದ್ದರೆ, ಟೋಪಿ ಅಥವಾ ಛತ್ರಿ ಬಳಸಬೇಕು. ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದ್ದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು.

ಓ.ಆರ್.ಎಸ್, ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಕ್ಷ್ಮಿ, ತೋರಣಿ (ಅಕ್ಕಿ ನೀರು), ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸಬೇಕು. ಇದು ದೇಹವನ್ನು ಮರು- ಜಲೀಕರಣ ಮಾಡಲು ಸಹಾಯ ಮಾಡುತ್ತದೆ. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಬೇಕು ಹಾಗೂ ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಬೇಕು. ಮನೆಯನ್ನು ತಂಪಾಗಿ ಇರಿಸಬೇಕು, ಪರದೆಗಳು, ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಬೇಕು ಮತ್ತು ರಾತ್ರಿಯಲ್ಲಿ ಕಿಟಕಿಗಳನ್ನು ತೆರೆದಿಡಬೇಕು. ಫ್ಯಾನ್, ಒದ್ದೆ ಬಟ್ಟೆಗಳನ್ನು ಬಳಸಬೇಕು ಮತ್ತು ತಣ್ಣೀರಿನಲ್ಲಿ ಸ್ನಾನ ಮಾಡಬೇಕು.

ವ್ಯಕ್ತಿಯು ಸನ್‌ಸ್ಟ್ರೋಕ್‌ಗೆ ಒಳಗಾಗಿದ್ದಲ್ಲಿ ವ್ಯಕ್ತಿಯನ್ನು ತಂಪಾದ ಸ್ಥಳದಲ್ಲಿ ನೆರಳಿನ ಕೆಳಗೆ ಇರಿಸಿ, ಅವರನ್ನು ಒದ್ದೆ ಬಟ್ಟೆಯಿಂದ ಒರೆಸಿ/ಆಗಾಗ ದೇಹವನ್ನು ತೊಳೆಯಬೇಕು. ತಲೆಯ ಮೇಲೆ ಸಾಮಾನ್ಯ ತಾಪಮಾನದ ನೀರನ್ನು ಸುರಿಯಬೇಕು. ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು ಮುಖ್ಯ ವಿಷಯ.
ವ್ಯಕ್ತಿಗೆ ಓ.ಆರ್.ಎಸ್ ಕುಡಿಯಲು ಅಥವಾ ನಿಂಬೆ ಸರಬತ್/ತೋರಣಿ ಅಥವಾ ದೇಹವನ್ನು ಪುನರ್ಜಲೀಕರಣಗೊಳಿಸಲು ಉಪಯುಕ್ತವಾದ ಯಾವುದನ್ನಾದರೂ ನೀಡಬೇಕು. ತಕ್ಷಣ ವ್ಯಕ್ತಿಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ರೋಗಿಗೆ ತಕ್ಷಣ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿರುತ್ತದೆ. ಏಕೆಂದರೆ ಶಾಖದ ಹೊಡೆತಗಳು ಮಾರಣಾಂತಿಕವಾಗಬಹುದು.

ಸಾರ್ವಜನಿಕರು ತಂಪಾದ ವಾತಾವರಣದಿಂದ ಬಿಸಿ ವಾತಾವರಣಕ್ಕೆ ಬಂದವರ ದೇಹವು ಶಾಖಕ್ಕೆ ಒಗ್ಗಿಕೊಳ್ಳುವವರೆಗೆ ಅವರು ಒಂದು ವಾರದವರೆಗೆ ತೆರೆದ ಮೈದಾನದಲ್ಲಿ ಚಲಿಸಬಾರದು ಮತ್ತು ಸಾಕಷ್ಟು ನೀರು ಕುಡಿಯಬೇಕು. ಶಾಖ ತರಂಗದ ಸಮಯದಲ್ಲಿ ಬಿಸಿ ವಾತಾವರಣಕ್ಕೆ ಕ್ರಮೇಣ ಒಡ್ಡಿಕೊಳ್ಳುವುದರಿಂದ ಒಗ್ಗಿಕೊಳ್ಳುವಿಕೆಯನ್ನು ಸಾಧಿಸಲಾಗುತ್ತದೆ.

ರೈತರು/ಕೃಷಿ ಕಾರ್ಮಿಕರು ಹೊಲದಲ್ಲಿ ಕೆಲಸ ಮಾಡುತ್ತಿದ್ದರೆ, ಟೋಪಿ ಅಥವಾ ಛತ್ರಿ ಬಳಸಬೇಕು. ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಬೇಕು. ಪ್ರಯಾಣಿಕರು ಪ್ರಯಾಣಿಸುವಾಗ ನೀರನ್ನು ಜೊತೆಗೆ ಕೊಂಡೊಯ್ಯಬೇಕು.

ಕರಾವಳಿ ಕರ್ನಾಟಕದ ಬಿಸಿ ಮತ್ತು ಆರ್ದ ಪರಿಸ್ಥಿತಿಗಳಿಗೆ ಸಲಹೆ : ಸಾಧಾರಣ ತಾಪಮಾನ ಮತ್ತು ಶಾಖವು ಸಾಮಾನ್ಯ ಜನರಿಗೆ ಸಹಿಸಿಕೊಳ್ಳಬಲ್ಲದು ಆದರೆ ದುರ್ಬಲ ಜನರಿಗೆ ಮಧ್ಯಮ ಆರೋಗ್ಯ ಕಾಳಜಿ ಉದಾ. ಶಿಶುಗಳು, ವೃದ್ಧರು, ದೀರ್ಘಕಾಲದ ಕಾಯಿಲೆ ಇರುವ ಜನರು. ಬಿಸಿಲಿನಲ್ಲಿ ತಲೆ ಹಾಗೂ ದೇಹವನ್ನು ಸೂರ್ಯನ ಕಿರಣಗಳಿಗೆ ಒಡ್ಡಬಾರದು, ಹಗುರವಾದ, ತಿಳಿ ಬಣ್ಣದ, ಸಡಿಲವಾದ, ಹತ್ತಿ ಬಟ್ಟೆಗಳನ್ನು ಧರಿಸಬೇಕು, ಟೋಪಿ ಅಥವಾ ಕೊಡ/ಛತ್ರಿ ಬಳಸಬೇಕು.

ಒಂದು ವೇಳೆ ಹೊರಗೆ ಬಿಸಿಲಿನಿಂದ ಮನೆಗೆ ಬಂದ ತಕ್ಷಣ ಕೂಡಲೇ ಅತಿ ತಂಪಾದ ನೀರು ಕುಡಿಯಬಾರದು ಅಥವಾ ಎ.ಸಿ/ ಕೂಲರ್‌ಗಳನ್ನು ಕೂಡಲೇ ಬಳಸುವುದು ಸೂಕ್ತವಲ್ಲ.

ಬಿಸಿಗಾಳಿ ಸಂದರ್ಭಗಳಲ್ಲಿ ಸಮುದಾಯ ಮಟ್ಟದಲ್ಲಿ ಅನುಸರಿಸಬೇಕಾದ ಕ್ರಮಗಳು: ಸಾಧ್ಯವಾದಮ್ಮ ತಂಪಾದ ಸ್ಥಳಗಳಲ್ಲಿ ಇರಬೇಕು. ಬಿಸಿಲಿನ ಅವಧಿಯಲ್ಲಿ ಕೊಡೆಗಳನ್ನು ಬಳಸಬೇಕು. ಸಾಧ್ಯವಾದಷ್ಟು ಹತ್ತಿಯ ಉಡುಪುಗಳನ್ನು ಹಾಗೂ ಹತ್ತಿಯ ಟೋಪಿಗಳನ್ನು ಧರಿಸಬೇಕು. ಹೆಚ್ಚಿನ ಬಿಸಿಲು ಅವಧಿಯಲ್ಲಿ ವಿಶ್ರಾಂತಿ ಪಡೆಯಬೇಕು. ಸಾಕಷ್ಟು ನೀರು, ಮಜ್ಜಿಗೆ ಕುಡಿಯಬೇಕು. ವಾಸವಿರುವ ಕೋಣೆಯನ್ನು ತಂಪಾಗಿರಿಸಬೇಕು. ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ಕೂಡಲೇ ತಂಪಾದ ಸ್ಥಳಕ್ಕೆ ರವಾನಿಸಬೇಕು. ಬಿಸಿಗಾಳಿ ತುತ್ತಾದ ವ್ಯಕ್ತಿಗೆ ಕೂಡಲೇ ಚಿಕಿತ್ಸೆ ನೀಡಬೇಕು. ಬಿಸಿಗಾಳಿ ತುತ್ತಾದವರಿಗೆ ಸಾಕಷ್ಟು ಕುಡಿಯುವ ನೀರು, ಮಜ್ಜಿಗೆ, ದ್ರವಹಾರ ನೀಡಬೇಕು.

ನೇರ ಬಿಸಿಲು/ಬಿಸಿಗಾಳಿಗೆ ಒಡ್ಡಿಕೊಳ್ಳಬಾರದು. ಬಿಸಿಲಿನ ಅವಧಿಯಲ್ಲಿ ಕೊಡೆ ಇಲ್ಲದೆ ಹೊರಗೆ ಹೋಗಬಾರದು. ಕಪ್ಪು /ಘಾಡ ಬಣ್ಣದ ತೆಳುವಾದ ಹಾಗೂ ಸಿಂಥಟಿಕ್ ಉಡುಪುಗಳನ್ನು ಧರಿಸಬಾರದು. ನೇರವಾಗಿ ಬಿಸಿಲಿನ ಝಳಕ್ಕೆ ತಲೆ ಒಡ್ಡಬಾರದು. ಹೆಚ್ಚಿನ ಬಿಸಿಲು ಇರುವ ಅವಧಿಯಲ್ಲಿ ಶ್ರಮದಾಯಕ ದೈಹಿಕ ಕೆಲಸಗಳನ್ನು ಮಾಡಬಾರದು. ಬಿಸಿ ಚಹ, ಮದ್ಯ ಸೇವಿಸಬಾರದು. ವಾಸವಿರುವ ಕೋಣೆಯಲ್ಲಿ ನೇರವಾಗಿ ಬಿಸಿಲು ಬೀಳುವುದನ್ನು ತಪ್ಪಿಸಬೇಕು. ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ಕೂಡಲೇ ತಂಪಾದ ಸ್ಥಳಕ್ಕೆ ರವಾನಿಸಲು ತಡಮಾಡಬಾರದು. ಬಿಸಿಗಾಳಿ ತುತ್ತಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುವುದನ್ನು ತಡಮಾಡಬಾರದು. ಬಿಸಿಗಾಳಿ ಸಂದರ್ಭಗಳಲ್ಲಿ ಚಹಾ, ಕಾಫಿ ಮತ್ತು ಜೀನು ಸೇವಿಸಬಾರದು.

ತುರ್ತು ಸೇವೆಗಾಗಿ ಶುಲ್ಕ ರಹಿತ 1077 ದೂ.ಸಂಖ್ಯೆ: 0820-2574802 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಯಕ್ಷಗಾನ ಪ್ರದರ್ಶನಕ್ಕೆ ಪೋಲೀಸರ ತಡೆ ಘಟನೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ- ಪಕ್ಷದ ಮೇಲೆ ಮಿತ್ಯಾರೋಪ ಸಹಿಸಲ್ಲ- ಕಾರ್ಲೋತ್ಸವದ ತಡೆಗೆ ಶತ ಪ್ರಯತ್ನ ಪಟ್ಟು ಮಾರ್ಯಾದೆ ಕಳೆದು ಕೊಂಡವರಿಂದ ನೈತಿಕತೆಯ ಪಾಠದ ಅಗತ್ಯವಿಲ್ಲ -ಶುಭದರಾವ್

Madhyama Bimba

ರಾಷ್ಟ್ರೀಯ ಕರಾಟೆ ಸ್ಪರ್ಧೆ: ವಿದ್ಯಾರ್ಥಿಗಳ ಸಾಧನೆ

Madhyama Bimba

ಹೆಬ್ರಿ -ಮುದ್ರಾಡಿಯ ಪ್ರವಾಹಪೀಡಿತ ಪ್ರದೇಶಕ್ಕೆ ಶಾಸಕರಾದ ವಿ.ಸುನಿಲ್ ಕುಮಾರ್ ಭೇಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More