ಕಾರ್ಕಳ : ಅಧಿಕಾರದ ಅಮಲಿನಲ್ಲಿ ನಶೆಯನ್ನು ತಲೆಗೇರಿಸಿಕೊಂಡು ಮಾಡಿರುವ ತಪ್ಪಿನಿಂದ ತಪ್ಪಿಸಿಕೊಳ್ಳಲು, ಕಾರ್ಕಳದ ಬಿಜೆಪಿ ದಿನಕ್ಕೊಂದು ಬಗೆಯ ಪ್ರಹಸನಕ್ಕಿಳಿದಿದೆ. ಒಂದು ಸುಳ್ಳನ್ನು ಮುಚ್ಚಿ ಹಾಕಲು ಸಾವಿರ ಸುಳ್ಳಿನ ಮಂತ್ರವನ್ನು ಜಪಿಸುತ್ತಿದೆ. ಜನತೆ ಈ ಸುಳ್ಳುಗಳಿಗೆ ಮರುಳಾಗದಿರುವುದನ್ನು ಕಂಡು, ಬಾಯಿಗೆ ಬಂದಂತೆ ಕಿರುಚಾಡಲು ಸುರುವಿಟ್ಟಿದೆ. ಪರಶುರಾಮನ ನಕಲಿ ಮೂರ್ತಿಯ ಸೃಷ್ಟಿಕರ್ತನ ರಕ್ಷಣೆಗೆ ನಿಂತುಕೊಂಡು ಮುಖ ತೋರಿಸಲಾಗದಷ್ಟು ನಾಚಿಕೆಗೆಡುತ್ತಿದೆ ಎಂದು ಯುವ ಕಾಂಗ್ರೇಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ ತಿಳಿಸಿದ್ದಾರೆ.
ಕಾರ್ಕಳದ ಪ್ರವಾಸೋದ್ಯಮವನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ ಎನ್ನುವುದು ಬಿಜೆಪಿಯ ಈ ಬಾರಿಯ ಹೊಸ ಸ್ಲೋಗನ್. ಆದರೆ ನಕಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಬೇಡಿಕೆ ಇಟ್ಟರ‍್ಯಾರು ಎನ್ನುವುದು ನಮ್ಮ ಪ್ರಶ್ನೆ.
ಬೈಲೂರಿನ ಉಮಿಕಲ್ಲ್ಬೆಟ್ಟದಲ್ಲಿ ನಕಲಿ ಪರಶುರಾಮನ ಮೂರ್ತಿಯನ್ನು ಪ್ರತಿಷ್ಟಾಪಿಸಿ, ಜನತೆಯ ಮುಂದೆ ಕಂಚಿನ ಮೂರ್ತಿ ಎಂದು ಹೇಳಿಕೊಂಡು ಬರಲು, ಕಾಂಗ್ರೆಸ್ ಏನಾದರೂ ಒತ್ತಾಯಿಸಿತ್ತೇ ?. ಇಲ್ಲವಲ್ಲ. ಹಾಗಾದರೆ ಈ ಸಂಕಷ್ಟವನ್ನು ತಂದೊಡ್ಡಿಕೊಂಡು, ಈಗ ಬೇರೆಯವರ ಕಡೆ ಬೆರಳು ತೋರಿಸುವ ಅನಿವಾರ್ಯತೆ ಬಿಜೆಪಿಗೆ ಏಕೆ ಬಂದಿದೆ ? ಎಂದು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಹಿಂದುತ್ವದ ಪ್ರತಿಪಾದಕರು ಎಂದು ಹೇಳಿಕೊಂಡು, ದೈವ-ದೇವರನ್ನು ಗುತ್ತಿಗೆ ಪಡೆದಂತೆ ಮಾತನಾಡಿಕೊಳ್ಳುತ್ತಿದ್ದ ಬಿಜೆಪಿಗೆ, ನಕಲಿ ಮೂರ್ತಿಗೆ ಕೈ ಮುಗಿಸುವಲ್ಲಿಯವರೆಗೆ ಜನತೆಯನ್ನು ಮಂಗ ಮಾಡುವ ಅವಶ್ಯಕತೆ ಏನಿತ್ತು ?. ಶಾಸಕರ ಬೆಂಬಲಿಗರು ಪರದಾಡುತ್ತಿದ್ದು, ನಾಯಕನ ರಕ್ಷಣೆಗೆ ನಿಂತಿರುವುದನ್ನು ಕಂಡಾಗ ಅಯ್ಯೋ… ಪಾಪ ಎನಿಸುತ್ತಿದೆ.
ಸ್ವಾಭಿಮಾನವನ್ನು ಕಳೆದುಕೊಂಡು, ಪರಶುರಾಮ ದೇವರಿಗೆ ವಂಚಿಸಿ, ದಿನಲೂ ಸುಳ್ಳು ಹೇಳುತ್ತಾ ತಿರುಗುವ ಪರಿಸ್ಥಿತಿ ಬಿಜೆಪಿ ಕಾರ್ಯಕರ್ತರಿಗೆ ಅನಿವಾರ್ಯವಾಗಿದೆ. ಆದರೂ ದೇವರನ್ನು ಈ ಸ್ಥಿತಿಗೆ ತಂದಿಟ್ಟ ಪಶ್ಚತ್ತಾಪ ಅವರಲಿಲ್ಲದಿರುವುದು, ಅವರಲ್ಲಿರುವ ಧಾರ್ಮಿಕ ನಂಬಿಕೆ ಕೇವಲ ಮತ ಬೇಟೆಗಾಗಿ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದರು.
ಗೋಮಾಳ ಜಮೀನಿನಲ್ಲಿ ನಕಲಿ ಮೂರ್ತಿ ಪ್ರತಿಷ್ಠಾಪಿಸಿ, ಅವರ ಸರಕಾರದಿಂದಲೇ ಭೂಮಿಯನ್ನು ತಿರಸ್ಕರಿಸಿ, ಈಗ ಕಾಂಗ್ರೆಸ್‌ನ ಮೇಲೆ ಗೂಬೆ ಕೂರಿಸಲು ಹೋರಟಿರುವ ಬಿಜೆಪಿಗರ ನಿಜ ಬಣ್ಣ ಬಯಲಾಗಿದೆ. ಇನ್ನು ಕೂಡಾ ಪರಶುರಾಮನ ಮೂರ್ತಿ ಅಸಲಿ ಎನ್ನುವ ಅಜ್ಞಾನಿಗಳಿದ್ದರೆ, ಮೂರ್ತಿಯ ವಿಚಾರದಲ್ಲಿ ಬಹೀರಂಗ ಚರ್ಚೆಗೆ ಬನ್ನಿ. ಯುವ ಕಾಂಗ್ರೆಸ್ ಸಿದ್ದವಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ಸವಾಲು ಹಾಕಿದ್ದಾರೆ.