ನನ್ನ ಹೆಸರಿನಲ್ಲಿ ನನಗೆ ತಿಳಿಯದಂತೆ ಸಾಲ ಮಂಜೂರುಗೊಳಿಸಿ ಮರುಪಾವತಿಗಾಗಿ ನಿರಂತರ ಕಿರುಕುಳ ನೀಡುತ್ತಿರುವುದಾಗಿ ಮೂಡುಬಿದಿರೆಯ ಆಕ್ಸಿಸ್ ಬ್ಯಾಂಕ್ ವಿರುದ್ಧ ಗ್ರಾಹಕರಾಗಿದ್ದ ರಾಜೇಶ್ ಗೌಡ ಎಂಬವರು ಆರೋಪಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮೂಡುಬಿದಿರೆಯ ಗ್ಯಾಸ್ ಏಜೆನ್ಸಿ ಒಂದರಲ್ಲಿ ವೃತ್ತಿ ನಿರತರಾಗಿದ್ದು, ಸಂಬಳಕ್ಕಾಗಿ ತೆರೆಯಲಾದ ಖಾತೆಗೆ ನನಗೆ ತಿಳಿಯದಂತೆ 4,20,000ಮೊತ್ತವನ್ನು ಸಾಲವಾಗಿ ಮಂಜೂರುಗೊಳಿಸಿ ಮರುಪಾವತಿಗಾಗಿ ಇದೀಗ ನನ್ನ ಮನೆಯವರಿಗೆ ಹಾಗೂ ನನಗೆ ನಿರಂತರ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ದೂರಿದ್ದಾರೆ.
2021ರ ಮಾ. 19ರಂದು ಸಾಲ ಮಾಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಸಾಲದ ಹಣವನ್ನೇ ಪ್ರತಿ ತಿಂಗಳು 10,893 ಇಎಂಐ ಆಗಿ ಬ್ಯಾಂಕ್ ಪಡೆದುಕೊಳ್ಳುತ್ತಿದೆ. ಈ ಬಗ್ಗೆ ನನ್ನ ಗಮನಕ್ಕೆ ಬಂದಕೂಡಲೇ ಸಾಲವನ್ನು ನಾನು ಪಡೆದಿಲ್ಲ ಎಂಬುದಾಗಿ ಬ್ಯಾಂಕ್ ಗಮನಕ್ಕೆ ತಂದರೂ ಬ್ಯಾಂಕು ಸಿಬ್ಬಂದಿಗಳು ಗಂಭೀರವಾಗಿ ಪರಿಗಣಸದೇ ನಿರ್ಲಕ್ಷ ತೋರಿರುವುದಾಗಿ ಅವರು ದೂರಿದ್ದಾರೆ.
ಈ ಬಗ್ಗೆ ಬ್ಯಾಂಕ್ ಒಂಬುಡ್ಸ್‌ಮೆನ್ ಸಹಿತ ವಿವಿಧ ಇಲಾಖೆಗಳಿಗೆ ಜನಪ್ರತಿನಿಧಿಗಳಿಗೆ ದೂರು ನೀಡಿರುವುದಾಗಿಯೂ ಅವರು ಹೇಳಿದ್ದಾರೆ. ನನ್ನದಲ್ಲದ ಸಾಲ ವಸೂಲಾತಿಗಾಗಿ ಬ್ಯಾಂಕ್‌ನಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಬ್ಯಾಂಕ್ ಅಧಿಕಾರಿಗಳನ್ನು ಅವರು ವಿಚಾರಣೆಗೆ ಕರೆದು ಮಾತನಾಡಿದಾಗ ಕೆಲವು ಸಮಯ ಸುಮ್ಮನಾಗುತ್ತಿದ್ದಾರೆ. ಪೊಲೀಸರ ಎದುರು ಸಾಲದ ವ್ಯವಸ್ಥೆ ಬಗ್ಗೆ ಸರಿಪಡಿಸಿಕೊಳ್ಳುವುದಾಗಿ ತಿಳಿಸಿದ ಅಧಿಕಾರಿಗಳು ನಂತರ ಮತ್ತೇ ವಸೂಲಾತಿ ಚಾಳಿಯನ್ನು ಮುಂದುವರಿಸುತ್ತಿರುವುದಾಗಿಯೂ ದೂರಿದ್ದಾರೆ.
ಪ್ರಸ್ತುತ ಬ್ಯಾಂಕ್ ಅಧಿಕಾರಿಗಳು ತಿಳಿಸಿರುವಂತೆ 1,39,760 ರೂ. ಬಾಕಿ ಇರುವುದಾಗಿಯೂ ಹೇಳಲಾಗಿದೆ.
ಈ ಖಾತೆಗೆ ಜಮಾಗೊಂಡ ಬೆಳೆ ವಿಮೆ ಹಣವನ್ನು ಕೂಡ ಬ್ಯಾಂಕ್ ಸಾಲ ವಸೂಲಾತಿಗೆ ಬಳಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಆದ್ದರಿಂದ ತನ್ನದಲ್ಲದ ಸಾಲದಿಂದಾಗಿ ಹೈರಾಣಾಗಿರುವ ನನಗೆ ಸೂಕ್ತ ನ್ಯಾಯ ಒದಗಿಸಿಕೊಡುವಂತೆ ಅವರು ವಿನಂತಿಸಿದ್ದಾರೆ.