ಇಲ್ಲಿನ ಜೈನಮಠದ ವ್ಯಾಪ್ತಿಗೆ ಒಳಪಟ್ಟ ಕಲ್ಸಂಗ ಬಳಿಯ ಮೂಲನಾಗ ಸ್ಥಾನ ಪುನರ್ ಜೀರ್ಣೋದ್ಧಾರಗೊಂಡಿದ್ದು, ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಾಗಶಿಲಾ ಪ್ರತಿಷ್ಠೆ ಹಾಗೂ ಅಶ್ಲೇಷಾ ಬಲಿ ನಡೆಯಿತು.
ಮಾರೂರು ಖಂಡಿಗ ರಾಮದಾಸ ಆಸ್ರಣ್ಣ ಅವರ ಪೌರೋಹಿತ್ಯದಲ್ಲಿ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಿತು.
ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಮೂಡುಬಿದಿರೆ ಹಿಂದೆ ಉರಗಪುರ, ವಂಶಪುರ, ಬಿದಿರಿನಿಂದ ಅವೃತ್ತವಾದ ಕಾರಣ ಬಿದಿರೆ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಹಿಂದೆ ಕಲ್ಸಂಕ ಪ್ರದೇಶವು ನಾಗಸರೋವರ ಪ್ರದೇಶವಾಗಿತ್ತು. ಈಗಲೂ ಕಲ್ಸಂಕ ಪ್ರದೇಶದಲ್ಲಿ ತೊರೆ ಇದೆ. ಇಲ್ಲಿರುವ ಪ್ರಾಚೀನ ನಾಗಬನವಿದು. ರಾಹು-ಕೇತುವಿನ ದೋಷಗಳನ್ನು ದೂರ ಮಾಡುವಂತ ಕೇಂದ್ರವಾಗಿದೆ. ಇದನ್ನು ಜೀರ್ಣೋದ್ಧಾರ ಮಾಡುವ ಮೂಲಕ ಬಸದಿಗಳ, ಮಠದ ಜೀರ್ಣೋದ್ಧಾರ ಮಾಡುವಂತಹ ಕೆಲಸಕ್ಕೆ ಮುಂದಡಿ ಇಟ್ಟಿದ್ದೇವೆ ಎಂದು ನುಡಿದರು.
ನಾಗದೇವರಿಗೆ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ, ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಜೋಡಿ ನಾಗನ ಸಾನಿಧ್ಯವಿರುವ ಅಪರೂಪದ ನಾಗಬನ ಇದಾಗಿದೆ. ಮುಂದೆ ಇದು ಕಾಳಸರ್ಪ ದೋಷ ಪರಿಹಾರಕ್ಕೆ ಪ್ರಮುಖ ಕೇಂದ್ರವಾಗಲಿದೆ ಎಂದರು.
ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್-ಕರ್ನಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ ಪ್ರತಿಮಾ ದಂಪತಿ ಪೂಜಾರ್ಥಿಗಳಾಗಿದ್ದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಆದರ್ಶ್, ಪುರಸಭೆ ಸದಸ್ಯೆ ಶ್ವೇತಾ ಪ್ರವೀಣ್, ಇತಿಹಾಸ ತಜ್ಞ ಡಾ.ಪುಂಡಿಕಾ ಗಣಪಯ್ಯ ಭಟ್, ಮೂಡುಬಿದಿರೆ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಭಟ್, ಪ್ರಮುಖರಾದ ಕೆ.ಪಿ ಜಗದೀಶ್ ಅಧಿಕಾರಿ, ಶಂಭವ್ ಕುಮಾರ್, ಅಂಡಾರು ಗುಣಪಾಲ ಹೆಗ್ಡೆ, ಪ್ರವೀಣ್‌ಚಂದ್ರ ಜೈನ್, ಡಾ.ಎಸ್.ಪಿ ವಿದ್ಯಾ ಕುಮಾರ್, ಡಾ.ಪ್ರಭಾತ್‌ಚಂದ್ರ, ಪಾರ್ಶ್ವನಾಥ ಇಂದ್ರ, ಶೈಲೇಂದ್ರ ಆರೋಹ, ಎಂಸಿಎಸ್ ಬ್ಯಾಂಕ್‌ನ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘವೀರ್ ಕಾಮತ್, ಮಠದ ವ್ಯವಸ್ಥಾಪಕ ಸಂಜಯಂತ್ ಶೆಟ್ಟಿ ಉಪಸ್ಥಿತರಿದ್ದರು.