ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜು ಹಾಗು ಮಾಹೆ ಮಣಿಪಾಲ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಶಿಕ್ಷಣ ಮತ್ತು ಮಾಧ್ಯಮ ಪ್ರತಿನಿಧಿಗಳ ಸಮಾವೇಶ ಇಂದು ನಡೆಯಿತು. ಮಣಿಪಾಲ ಇನ್ಫಾರ್ಮಶನ್ ಕಮ್ಯುನಿಕೇಷನ್ಸ್ ನಿರ್ದೇಶಕರಾದ ಡಾ. ಶುಭಾ ಎಚ್. ಎಸ್. ಉದ್ಘಾಟನೆ ನೆರವೇರಿಸಿ ಮಾತನಾಡಿ ಗ್ರಾಮೀಣ ಪತ್ರಕರ್ತರು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಅಸ್ಪಷ್ಟ ಸುದ್ದಿಗಳು ಸಮರ್ಪಕ ಮಾಹಿತಿ ನೀಡುವಲ್ಲಿ ಎಡವುತ್ತಿರುವುದು ಸರಿಯಲ್ಲ. ಕೆಲವೊಂದು ಭಾಗಗಳಲ್ಲಿ ಪತ್ರಕರ್ತರೆ ಇಲ್ಲದಿರುವುದು ಪ್ರಪಂಚದ ಬೆಳವಣಿಗೆಯನ್ನು ಆಸ್ಪಷ್ಟಗೊಳಿಸುತ್ತಿರುವುದಕ್ಕೆ ಉದಾಹರಣೆ ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮೂಡುಬಿದಿರೆ ಜನತೆಗೆ ಶಿಕ್ಷಣ ಮರೀಚಿಕೆ ಆಗಿದ್ದ ಸಂದರ್ಭದಲ್ಲಿ ಮಹಾವೀರ ಕಾಲೇಜು ಪ್ರಾರಂಭಿಸಿದ ಮಣಿಪಾಲ ಸಮುದಾಯದ ಮುಂದಾಲೋಚನೆ ಶ್ಲಾಘನೀಯ ಎಂದರು.
ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಪ್ರಿನ್ಸಿಪಾಲ್ ಡಾ. ರಾಧಾಕೃಷ್ಣ ಶೆಟ್ಟಿ, ಪಿಯು ಕಾಲೇಜಿನ ಪ್ರಿನ್ಸಿಪಾಲ್ ರಮೇಶ್ ಭಟ್, ಹಳೆ ವಿದ್ಯಾರ್ಥಿ ಸಂಜಯ್ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ಪತ್ರಕರ್ತ ಧನಂಜಯ್ ವೇದಿಕೆಯಲ್ಲಿದ್ದರು.
ವಿವಿಧ ಪತ್ರಿಕೆಗಳಲ್ಲಿ ವೃತ್ತಿ ನಿರತ ಪ್ರಸನ್ನ ಹೆಗ್ಡೆ, ಧನಂಜಯ ಮೂಡುಬಿದಿರೆ, ಆಶ್ರಫ್ ವಾಲ್ಪಾಡಿ, ಜೈಸನ್ ತಾಕೋಡೆ, ಎಚ್. ಮಹಮ್ಮದ್ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಡಾ ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ರಕ್ಷಿತಾ ಉಪಾಧ್ಯಾಯ ಸನ್ಮಾನಿತರನ್ನು ಪರಿಚಯಿಸಿದರು. ಧನಂಜಯ್ ಮೂಡುಬಿದಿರೆ ಧನ್ಯವಾದವಿತ್ತರು. ಶ್ರೇಷ್ಠ ಕಾರ್ಯಕ್ರಮ ನಿರೂಪಿಸಿದರು.
ನಂತರ ರಘುವೀರ್ ಬದ್ರಿನಾಥ್, ಮೋಹನ್ ದಾಸ್ ಪೈ ಅವರು ಮೊಬೈಲ್ ಜರ್ನಲಿಸಂ ಬಗ್ಗೆ ಮಾಹಿತಿ ನೀಡಿದರು