ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ನೇತೃತ್ವದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲ ಮತ್ತು ಪೂರ್ಣ ಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನ ಬೆಂಗಳೂರು ಸಹಯೋಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗು ಕಾಸರಗೋಡು ಜಿಲ್ಲೆಗಳಲ್ಲಿ ಹಿಂದೂ ಸಮಾಜದ ಸೌಹಾರ್ದ ಸಂಘಟನೆಗಾಗಿ ಯಾತ್ರೆ ನಡೆಸುವ ಭಕ್ತಿ ರಥ ಯಾತ್ರೆಯನ್ನು ಮೂಡುಬಿದಿರೆಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.
ಬಸ್ ನಿಲ್ದಾಣ ಪ್ರವೇಶಿಸಿದ ರಥಯಾತ್ರೆ ಉದ್ದೇಶಿಸಿ ಮಾತನಾಡಿದ ಜೈನ ಮಠಾಧೀಶರಾದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರು ಭಕ್ತಯಿಂದ ಶಕ್ತಿ. ಧರ್ಮ, ಆಚಾರ್ಯರು, ಸದ್ವಿಚಾರಗಳಿಗೆ ಶರಣಾಗುವುದೇ ಭಕ್ತಿ ಎಂದರು. ಶಕ್ತಿವಂತರು ದುರ್ಬಲರಿಗೆ ದಯೆ ತೋರಿಸಿ, ಉಳ್ಳವರು ದಾನ ಮಾಡಿ ಎಂದು ಸಲಹೆಯಿತ್ತರು.
ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ ಭಕ್ತಿರಥ ಯಾತ್ರೆ ಹಿಂದೂ ಸಮಾಜದ ಮೇಲಿರುವ ಸಂದೇಹಕ್ಕೆ ಸಾಧು ಸಂತರ ಮೂಲಕ ಪರಿಹಾರ ನೀಡಲಿದೆ ಎಂದರು.
ಉದ್ಯಮಿ ಶ್ರೀಪತಿ ಭಟ್, ಬಿಜೆಪಿ ಮುಖಂಡ ಸುದರ್ಶನ ಎಂ. ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯರು, ಎಂ. ಸಿ. ಎಸ್. ಬ್ಯಾಂಕ್ ವಿಶೇಷ ಕರ್ತವ್ಯಧಿಕಾರಿ ಚಂದ್ರಶೇಖರ ಎಂ. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರ್, ವಿಹಿಂಪ ಮುಖಂಡ ಶ್ಯಾಮ್ ಹೆಗ್ಡೆ, ಅಲಂಗಾರ್ ದೇವಸ್ಥಾನದ ಪ್ರಮುಖ ಸುಬ್ರಹ್ಮಣ್ಯ ಭಟ್, ಶಾಂತಾರಾಮ ಕುಡ್ವ ಮತ್ತಿತರರು ಭಾಗವಹಿಸಿದ್ದರು.
ರಥ ಯಾತ್ರೆ ಪ್ರಮುಖರಾದ ಕೃಷ್ಣರಾಜ್ ಕುತ್ಪಾಡಿ, ಶಶಾಂಕ್ ಭಟ್ ವೇಣೂರು ಹಿಂದೂ ಸಮಾಜದ ಒಗ್ಗೂಡುವಿಕೆಗಾಗಿ ರಥಯಾತ್ರೆಯನ್ನು ಪೇಜಾವರ ಮಠ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಏಪ್ರಿಲ್ 9ರಿಂದ 13ವರೆಗೆ ರಥಯಾತ್ರೆ ಸಂಚಾರದಲ್ಲಿದ್ದು ಭಕ್ತಿ ರಥಯಾತ್ರೆಯೊಂದಿಗೆ ಸದ್ಭಕ್ತರು ಸೇರಿಕೊಳ್ಳುವಂತೆ ಕೋರಿದರು. ಇಂದು ಉಜಿರೆಯಿಂದ ಬೆಳ್ತಂಗಡಿ ಮಾರ್ಗವಾಗಿ ಮೂಡುಬಿದಿರೆ ತಲುಪಿದ ರಥಯಾತ್ರೆ ಅಲಂಗಾರ್ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಕಾರ್ಕಳ ಪ್ರವೇಶ ಪಡೆಯಿತು.