ಮೂಡುಬಿದಿರೆಯ ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ಡಿ. 19ರಿಂದ 21ರವರೆಗೆ ರಜತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಿರುವುದಾಗಿ ಅಧ್ಯಕ್ಷ ಜೇಕಬ್ ವರ್ಗೀಸ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿ.19ರಂದು ಬೆಳಿಗ್ಗೆ ವಿಶೇಷ ಮಕ್ಕಳ ಪೋಷಕರು, ವಿಕಲಚೇತನರು, ಶಿಕ್ಷಕರು ಹಾಗೂ ಹಿತೈಷಿಗಳಿಂದ ಮೂಡುಬಿದಿರೆಯ ಬಸ್‌ಸ್ಟ್ಯಾಂಡ್ ಬಳಿಯಿಂದ ಸಮಾಜ ಮಂದಿರದವರೆಗೆ ಮೆರವಣಿಗೆ ನಂತರ ವಿಶೇಷ ಚೇತನರ ಜಿಲ್ಲಾಧ್ಯಕ್ಷ ಮುರಳೀಧರ ನಾಯ್ಕ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮವನ್ನು ತಹಶೀಲ್ದಾರ್ ಶ್ರೀಧರ ಮುಂಡಲಮನಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪೊಲೀಸ್ ನಿರೀಕ್ಷಕ ಸಂದೇಶ್, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಮುಖ್ಯಾಧಿಕಾರಿ ಇಂದು ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷ ಚೇತನರ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಕಲಾಮೇಳ, ಘೋಷಣಾ ಫಲಕ ರಚನೆ, ಸಂಗೀತ ನೃತ್ಯ ಮತ್ತು ರಂಗೋಲಿ ಸ್ಪರ್ಧೆ ಜರಗಲಿದೆ.
ಡಿ. 20ರಂದು ಸಮೃದ್ಧಿ ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ, ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಜರಗಲಿದೆ. ನವಚೇತನ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಅಧ್ಯಕ್ಷೆ ಶ್ರೀಮತಿ ವಸಂತಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯಿಶ್ ಚೌಟ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಂತರ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ ಮತ್ತು ಹಣಕಾಸು ಸಾಕ್ಷರತಾ ಸಮಾಲೋಚನೆ, ಸ್ವಸಹಾಯ ಸಂಘಗಳ ಗ್ರಾಮೀಣ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದ್ದು, ಮರುದಿನಕ್ಕೂ ಮುಂದುವರಿಯಲಿದೆ.
ಡಿ. 21ರಂದು ಜ್ಯೋತಿನಗರ ಶಾಲಾ ಬಳಿಯಿಂದ ಸಮಾಜ ಮಂದಿರದವರೆಗೆ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಹಿತೈಷಿಗಳಿಂದ ಭವ್ಯ ಮೆರವಣಿಗೆ ಜರಗಲಿದೆ. ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟನೆ ನೆರವೇರಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನಗೈಯಲಿದ್ದು, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆದರ್ಶ ಮೂಡುಬಿದಿರೆ ಅಧ್ಯಕ್ಷ ಜೇಕಬ್ ವರ್ಗೀಸ್ ಪ್ರಾಸ್ತಾವಿಕ ಭಾಷಣ ನಡೆಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನವಚೇತನ ಸೌಹಾರ್ದ ಸಹಕಾರಿಯ ಅಧ್ಯಕ್ಷೆ ಶ್ರೀಮತಿ ವಸಂತಿ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ಗಣೇಶ್ ಬಾರ್ದಿಲ ಭಾಗವಹಿಸಿದ್ದರು.
